ಮಂಗಳೂರು: ಮಕ್ಕಳ ಪ್ರತಿಭೆ, ಸೃಜನಶೀಲತೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ‘ಸ್ಪಾರ್ಕ್ ಟ್ರೀ’ ವತಿಯಿಂದ ಇದೇ ಮೇ 16 ಮತ್ತು 17ರಂದು ಮಂಗಳೂರಿನ ಪಾಲೇಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಕಿಡ್‌ಫೆಸ್ಟ್ 2026’ ಎಂಬ ವಿಶೇಷ ಮಕ್ಕಳ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳ ತರಬೇತಿ ಹಾಗೂ ಚಟುವಟಿಕೆ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಸೌಜನ್ಯ ಹೆಗ್ಡೆ ಹಾಗೂ ಪ್ರೀತಮ್ ಪೊನ್ನಪ್ಪ ಅವರ ನೇತೃತ್ವದಲ್ಲಿ ಈ ವಿಶಿಷ್ಟ ಕಾರ್ಯಕ್ರಮವು ನಡೆಯಲಿದೆ.
ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗಳನ್ನು ಕೇಂದ್ರೀಕರಿಸಿ ಒಂದು ವೇದಿಕೆ ನಿರ್ಮಿಸುವ ಆಶಯದೊಂದಿಗೆ ಈ ಉತ್ಸವವನ್ನು ರೂಪಿಸಲಾಗಿದ್ದು, ಇದರಲ್ಲಿ ಕೇವಲ ಮನರಂಜನೆ ಮಾತ್ರವಲ್ಲದೆ ಕಲಿಕೆ, ಆಟೋಟಗಳು, ಸೃಜನಾತ್ಮಕ ಚಟುವಟಿಕೆಗಳು ಹಾಗೂ ವಿವಿಧ ಕಾರ್ಯಾಗಾರಗಳು ಒಳಗೊಂಡಿರಲಿವೆ. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಮೊದಲ ಬಾರಿಗೆ ಮಕ್ಕಳಿಗಾಗಿ ‘ಕಿಡ್ಸ್ ಮ್ಯಾರಾಥಾನ್’ ಆಯೋಜಿಸಲಾಗಿದ್ದು, ಇದು ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿ, ಆತ್ಮವಿಶ್ವಾಸ ಮತ್ತು ಕ್ರೀಡಾಸ್ಪೂರ್ತಿಯನ್ನು ಬೆಳೆಸುವ ಗುರಿ ಹೊಂದಿದೆ. ಪೋಷಕರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ‘ಸ್ಪಾರ್ಕ್ ಟ್ರೀ’ ತಂಡದ ಪರವಾಗಿ ಸೌಜನ್ಯ ಹೆಗ್ಗಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರೀತಮ್ ಪೊನ್ನಪ್ಪ ಉಪಸ್ಥಿತರಿದ್ದರು.