ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡ) ವತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ 49ನೇ ಕಂಕನಾಡಿ ವಾರ್ಡಿನ ಸದಾಶಿವನಗರ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 10.65 ಲಕ್ಷ ರೂ. ಅನುದಾನದಲ್ಲಿ ಈ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, "ಈ ಹಿಂದೆ ಮೂಡ ವತಿಯಿಂದಲೇ ಈ ಪಾರ್ಕ್ ಅಭಿವೃದ್ಧಿಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಪಾರ್ಕ್ ಅನ್ನು ಇನ್ನಷ್ಟು ಆಧುನೀಕರಣಗೊಳಿಸುವಂತೆ ಸಾರ್ವಜನಿಕರು ನೀಡಿದ ಮನವಿಗೆ ಸ್ಪಂದಿಸಿ, ಮೂಡ ಸಭೆಯಲ್ಲಿ ಎಲ್ಲರ ಸಹಕಾರದೊಂದಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನರಿಗೆ ಪಾರ್ಕ್ ಮತ್ತಷ್ಟು ಸುಸಜ್ಜಿತವಾಗಿ ಲಭ್ಯವಾಗಲಿದೆ," ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಪ್ರಾಧಿಕಾರದ ಆಯುಕ್ತರಾದ ಮೊಹಮ್ಮದ್ ನಜೀರ್, ಪ್ರಮುಖರಾದ ಭಾಸ್ಕರ ಚಂದ್ರ ಶೆಟ್ಟಿ, ಕಿರಣ್ ರೈ, ರಘುನಾಥ್ ಶೆಟ್ಟಿ, ಸುಕೇಶ್, ಚೇತನ್ ನೆಕ್ಕರೆಮಾರ್, ಸುಮತಿ, ಮಾನಸ ರೈ, ಮೌನೇಶ್ ಚೌಟ, ಯಶೋಧ ಗಟ್ಟಿ, ತನುಜಾ ಎಕ್ಕೂರು, ನೀರಚ್‌ಚಂದ್ರ ಪಾಲ್, ಸುಮನ್‌ದಾಸ್, ಅಬ್ದುಲ್ ಜಲೀಲ್, ಸಭಿತಾ ಮಿಸ್ಕತ್ ಸೇರಿದಂತೆ ಹಲವು ಗಣ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.