ಧರ್ಮಸ್ಥಳ : ರಾಜ್ಯದ ಯೋಜನೆ ಮತ್ತು ಸಾಂಖಿಕ ಇಲಾಖೆಯ ಸಚಿವರಾಗಿದ್ದ ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕ ಶ್ರೀ ಡಿ. ಸುಧಾಕರ್ ಅವರ ನಿಧನದ ವಾರ್ತೆ ಕೇಳಿ ಅತ್ಯಂತ ವಿಷಾದವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ದಶಕಗಳ ಕಾಲ ಅಪಾರ ಅನುಭವ ಹೊಂದಿದ್ದ ಸುಧಾಕರ್ ಅವರು ಶಾಸಕರಾಗಿ ಮತ್ತು ಸಚಿವರಾಗಿ ಸಮಾಜಕ್ಕೆ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. ಸರಕಾರ ತಮಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದ ಅವರು, ಪಕ್ಷದ ವರಿಷ್ಠರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ಕ್ಷೇತ್ರದಲ್ಲಿ ಜನಾನುರಾಗಿ ನಾಯಕರಾಗಿ ಗುರುತಿಸಿಕೊಂಡಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಸುಧಾಕರ್ ಅವರು ಮಂಜುನಾಥ ಸ್ವಾಮಿಯ ಪರಮ ಭಕ್ತರಾಗಿದ್ದರು. ಪ್ರತಿ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದಾಗಲೂ ನನ್ನೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸುತ್ತಿದ್ದರು. ಇತ್ತೀಚೆಗೆ ಧರ್ಮಸ್ಥಳಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಮ್ಮ ಆನೆ ಮರಿ ‘ಶಿವಾನಿ’ಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷ ಹಂಚಿಕೊಂಡಿದ್ದು ಹಸಿರಾಗಿ ನೆನಪಿದೆ. ಧರ್ಮಸ್ಥಳದಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸಮಿತಿ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರು, ಕಾರ್ಯಕ್ರಮದ ಯಶಸ್ಸಿಗೆ ನೀಡಿರುವ ಸಹಕಾರ ಮರೆಯುವಂತಿಲ್ಲ. ಅಲ್ಪಕಾಲದ ಅನಾರೋಗ್ಯದಿಂದ ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಮಂಜುನಾಥ ಸ್ವಾಮಿ ನೀಡಲಿ ಎಂದು ಡಾ. ಹೆಗ್ಗಡೆಯವರು ಪ್ರಾರ್ಥಿಸಿದ್ದಾರೆ.