ಮೂಡುಬಿದಿರೆ: ಕೇಂದ್ರದ ಲೋಕಸೇವಾ ಆಯೋಗವು (UPSC) ನಡೆಸಿದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಹಾಗೂ ನೇವಲ್ ಅಕಾಡೆಮಿ (NA) ಪ್ರವೇಶ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಒಟ್ಟು 24 ವಿದ್ಯಾರ್ಥಿಗಳು ಅದ್ಭುತ ಸಾಧನೆಗೈದು ಉತ್ತೀರ್ಣರಾಗುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆಯಲ್ಲಿ ಉನ್ನತ ಅಧಿಕಾರಿಗಳಾಗುವ ನಿಟ್ಟಿನಲ್ಲಿ ಎನ್‌ಡಿಎ ಪ್ರಮುಖ ಘಟ್ಟವಾಗಿದ್ದು, ಈ ಗುರಿ ತಲುಪಲು ವಿದ್ಯಾರ್ಥಿಗಳನ್ನು ಸಮರ್ಥವಾಗಿ ಸಿದ್ಧಗೊಳಿಸುವಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಯಶಸ್ವಿಯಾಗಿದೆ.
ಈ ಸಾಲಿನ ಪರೀಕ್ಷೆಯಲ್ಲಿ ವಿವೇಕ್ ಎ, ಅದ್ವೈತ್ ವಿಕ್ರಾಂತ್ ಶೆಂಡೆ, ಅಮೋಘ್ ನಾಗರಾಜ್ ಬಿಲ್ಲೂರ್, ಮೊಹಮ್ಮದ್ ಯೂಸುಫ್ ನಿಸಾರ್ ಶೇಖ್, ಸಾಯೀಶ್ ಪ್ರಶಾಂತ್ ತಾಳೇಕರ್, ಪ್ರಹ್ಲಾದ್ ದತ್ತ ದೇಸಾಯಿ, ಸಂಹಿತ್ ವಿ ರಾವ್, ಹರ್ಷ ಎಂ, ಕೃತಿಕ್ ಬಿ, ಪ್ರಣವ್ ಎನ್ ಪಂಡಿತ್, ವಿಜಯಕುಮಾರ್ ಸಂಗಯ್ಯ ಚಿಕ್ಕಮಠ, ಪಿಯೂಷ್ ಎಚ್, ಶ್ರೇಯಸ್ ಸಿ ಕಬ್ಬಿನಕಂತಿಮಠ, ಭರತೇಶ್ ನಾಗೇಶ್ ಮೊಗೇರ್, ಚಿನ್ಮಯ್ ಎಸ್, ಸಂಕೇತ್ ಭಟ್, ಸುಮಿತ್ ವಿ ಕೆ, ಹರ್ಷ ರೆಡ್ಡಿ, ಮೋಹಿತ್ ಕುಮಾರ್ ಜೆ, ಅಕ್ಷಯ್ ಭಾರದ್ವಾಜ್, ಅನುಷ್ ಅರುಣ್ ಕೆ, ವಿಸ್ಮಯ್ ನಾರಾಯಣ್ ನಾಡಿಗ್, ಮೆಲ್ರಾಯ್ ಕ್ಯಾಸ್ಟೆಲಿನೋ ಹಾಗೂ ಇಶಾನ ಅವರು ಅರ್ಹತೆ ಪಡೆದ ಸಾಧಕರಾಗಿದ್ದಾರೆ.
ಆಳ್ವಾಸ್ ಕಾಲೇಜಿನಲ್ಲಿ ಎನ್‌ಡಿಎ ಆಕಾಂಕ್ಷಿಗಳಿಗಾಗಿಯೇ ವಿಶೇಷ ತರಬೇತಿ ವ್ಯವಸ್ಥೆ ಮಾಡಲಾಗಿದ್ದು, ಪಿಯುಸಿ ಪಠ್ಯದ ಜೊತೆಗೇ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೂ ಒತ್ತು ನೀಡಲಾಗುತ್ತಿದೆ. ಅನುಭವೀ ಉಪನ್ಯಾಸಕರಿಂದ ಗಣಿತ, ಸಾಮಾನ್ಯ ಜ್ಞಾನ, ಇಂಗ್ಲಿಷ್ ಹಾಗೂ ತಾರ್ಕಿಕ ಚಿಂತನೆ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ನಿಯಮಿತ ಮಾಕ್ ಟೆಸ್ಟ್ ಮತ್ತು ವೈಯಕ್ತಿಕ ಮಾರ್ಗದರ್ಶನ ವಿದ್ಯಾರ್ಥಿಗಳ ಯಶಸ್ಸಿಗೆ ಪೂರಕವಾಗಿದೆ. ಶೈಕ್ಷಣಿಕ ತಯಾರಿ ಮಾತ್ರವಲ್ಲದೆ, ರಕ್ಷಣಾ ಪಡೆಗೆ ಅಗತ್ಯವಿರುವ ದೈಹಿಕ ಕ್ಷಮತೆಗಾಗಿ ವ್ಯಾಯಾಮ, ಪೆರೇಡ್ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಇಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಈ ಅಮೋಘ ಸಾಧನೆಗೈದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಹಾಗೂ ಸಂಯೋಜಕ ವರುಣ್ ಪ್ರಭು ಶ್ಲಾಘಿಸಿ ಅಭಿನಂದಿಸಿದ್ದಾರೆ.