image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯಶಸ್ಸಿಗೆ ಏಕಾಗ್ರತೆ ಮತ್ತು ದೃಢನಿಶ್ಚಯವೇ ಮಂತ್ರ: ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ

ಯಶಸ್ಸಿಗೆ ಏಕಾಗ್ರತೆ ಮತ್ತು ದೃಢನಿಶ್ಚಯವೇ ಮಂತ್ರ: ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ

ಮೂಡುಬಿದಿರೆ: ಪ್ರತಿಯೊಂದು ವೈಫಲ್ಯವೂ ಜೀವನದಲ್ಲಿ ಮಹತ್ವದ ಪಾಠವನ್ನು ಕಲಿಸಿ ವ್ಯಕ್ತಿಯನ್ನು ಯಶಸ್ಸಿಗೆ ಇನ್ನಷ್ಟು ಹತ್ತಿರಕ್ಕೆ ಕರೆದೊಯ್ಯಬಲ್ಲದು ಎಂದು ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ ಅಭಿಪ್ರಾಯಪಟ್ಟರು. ಅವರು ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ “ಒಲಿವ್ ಗ್ರೀನ್ ಟು ಬ್ಯೂಟಿ ಕ್ವೀನ್ – ಎ ಜರ್ನಿ ವಿದಿನ್” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

​ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಯಾಗಿ ತಾವು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಸಂಪೂರ್ಣ ಪುರುಷ ಸೈನಿಕರಿಂದ ಕೂಡಿದ ಘಟಕದಲ್ಲಿ ಮಹಿಳೆಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಒಂದು ದೊಡ್ಡ ಸವಾಲಾಗಿತ್ತು ಎಂದು ನೆನಪಿಸಿಕೊಂಡರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತ-ಚೀನಾ ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುವಾಗ ತೀವ್ರವಾಗಿ ಗಾಯಗೊಂಡರೂ, ತಮ್ಮ ಶಸ್ತ್ರಾಸ್ತ್ರಗಳನ್ನು ನೆಲಕ್ಕೆ ಬೀಳದಂತೆ ಕಾಪಾಡಿಕೊಂಡ ಸಾಹಸದ ಕ್ಷಣಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಮಹಿಳೆಯರು ತಮ್ಮನ್ನು ತಾವು ಸಾಬೀತುಪಡಿಸಲು ಕೃತಕ ಪುರುಷತ್ವದ ಗುಣಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ, ಬದಲಾಗಿ ತಮ್ಮತನವನ್ನು ಉಳಿಸಿಕೊಂಡೇ ಸಬಲರಾಗಬೇಕು ಎಂದು ಅವರು ಕರೆ ನೀಡಿದರು. ಅಲ್ಲದೆ, ಮಹಿಳಾ ಸೇನಾ ಅಧಿಕಾರಿಗಳ ಸೇವಾ ಅವಧಿಯನ್ನು 10 ರಿಂದ 14 ವರ್ಷಗಳಿಗೆ ವಿಸ್ತರಿಸುವ ಹೋರಾಟದಲ್ಲಿ ತಾವು ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಅಂಕಿತಾ ಶ್ರೀವಾಸ್ತವ ಅವರ ಜೀವನಗಾಥೆ ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಪ್ರೇರಣೆಯಾಗಿದೆ. ಸಾರ್ವಜನಿಕ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ದೃಢವಾಗಿ ಗುರಿಯತ್ತ ಸಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಫೋರಂ ಅಧ್ಯಕ್ಷೆ ಡಾ. ದೀಪಾ ಕೊಠಾರಿ ಹಾಗೂ ಸಕ್ಷಮ ಮಹಿಳಾ ಘಟಕದ ಸಂಚಾಲಕಿ ಡಾ. ಗ್ರೀಷ್ಮಾ ವಿವೇಕ್ ಆಳ್ವ ಉಪಸ್ಥಿತರಿದ್ದರು. ಶ್ರದ್ಧಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರೆ, ಫಾತಿಮಾ ವಂದನಾರ್ಪಣೆ ಮಾಡಿದರು.

Category
ಕರಾವಳಿ ತರಂಗಿಣಿ