image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗೇರು ಕೃಷಿಯ ಪುನಶ್ಚೇತನಕ್ಕೆ ಜಾಗೃತಿ ಅಗತ್ಯ: ಸ್ಪೀಕರ್ ಯು.ಟಿ. ಖಾದರ್

ಗೇರು ಕೃಷಿಯ ಪುನಶ್ಚೇತನಕ್ಕೆ ಜಾಗೃತಿ ಅಗತ್ಯ: ಸ್ಪೀಕರ್ ಯು.ಟಿ. ಖಾದರ್

ಮಂಗಳೂರು: ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಗೇರು ಕೃಷಿಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ರೈತರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ನಗರದಲ್ಲಿಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ‘ಗೇರು ಮೇಳ’ದ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. "ಒಂದು ಕಾಲದಲ್ಲಿ ಕರಾವಳಿಯ ನೂರಾರು ಕುಟುಂಬಗಳಿಗೆ ಗೇರು ಉದ್ಯಮವೇ ಆಧಾರವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯವಾಗಿ ಬೆಳೆ ಕುಂಠಿತವಾಗಿರುವುದರಿಂದ ಕಾರ್ಖಾನೆಗಳು ಕಚ್ಚಾ ಗೇರಿಗಾಗಿ ದಕ್ಷಿಣ ಆಫ್ರಿಕಾವನ್ನು ಅವಲಂಬಿಸುವಂತಾಗಿದೆ. ಈ ಪರಿಸ್ಥಿತಿ ಬದಲಾಗಬೇಕು. ರೈತರು ಹೆಚ್ಚಿನ ಇಳುವರಿ ನೀಡುವ ತಳಿಗಳನ್ನು ಬೆಳೆಸಿ ಆರ್ಥಿಕ ಲಾಭ ಪಡೆಯಬೇಕು," ಎಂದು ಅವರು ಆಶಯ ವ್ಯಕ್ತಪಡಿಸಿದರು.

ಮೇ 17 ಮತ್ತು 18 ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಈ ‘ಗೇರು ಮೇಳ’ ನಡೆಯಲಿದ್ದು, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ಸುಧಾರಿತ ತಳಿಗಳ ಪ್ರದರ್ಶನ ಮತ್ತು ರೈತರಿಗೆ ತಾಂತ್ರಿಕ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ರೈತರು ಮಾರುಕಟ್ಟೆಯ ಭರವಸೆ ಮತ್ತು ಹೊಸ ಜ್ಞಾನದೊಂದಿಗೆ ಸಬಲರಾಗಲಿ ಎಂಬ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲ ಕರಿಕಾಲನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿ. ಕರಿಕಾಲನ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ್ ಉಪಸ್ಥಿತರಿದ್ದರು. ಈ ಮೇಳವು "ಮನೆಗೊಂದು ಗೇರು ಗಿಡ" ಎಂಬ ಯೋಜನೆಯನ್ನು ಉತ್ತೇಜಿಸುವ ಗುರಿಯನ್ನೂ ಹೊಂದಿದೆ.

Category
ಕರಾವಳಿ ತರಂಗಿಣಿ