ಮಂಗಳೂರು: ಪಲ್ಗುಣಿ ನದಿಗೆ ಒಳಚರಂಡಿ ತ್ಯಾಜ್ಯ ನೀರನ್ನು ನೇರವಾಗಿ ಬಿಡುತ್ತಿರುವುದರಿಂದ ನದಿ ನೀರು ಕಲುಷಿತಗೊಂಡು ಮೀನುಗಳು ಸಾವನ್ನಪ್ಪುತ್ತಿವೆ. ಈ ಪರಿಸರ ಮಾಲಿನ್ಯಕ್ಕೆ ಸರ್ಕಾರದ ಬೇಜವಾಬ್ದಾರಿತನವೇ ಪರೋಕ್ಷ ಕಾರಣ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಎಸ್ ಆರೋಪಿಸಿದ್ದಾರೆ. ಈ ಕೂಡಲೇ ಮಲಿನ ನೀರು ಶುದ್ಧೀಕರಣ ಘಟಕಗಳ (STP) ನಿರ್ವಹಣೆಗೆ ಪಾಲಿಕೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಸ್‌ಟಿಪಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಸರ್ಕಾರದಿಂದ ನಿರ್ವಹಣಾ ವೆಚ್ಚಕ್ಕೆ ಅಗತ್ಯ ಅನುದಾನ ಬಿಡುಗಡೆ ಆಗದ ಕಾರಣ ಈ ಘಟಕಗಳ ಕಾರ್ಯಕ್ಷಮತೆ ಕುಂಠಿತಗೊಂಡಿದೆ. ಬಹುತೇಕ ಎಸ್‌ಟಿಪಿಗಳಲ್ಲಿರುವ ಜನರೇಟರ್‌ಗಳು ದುರಸ್ತಿ ಕಾಣದೆ ವಿದ್ಯುತ್ ವ್ಯತ್ಯಯ ಉಂಟಾದ ಸಂದರ್ಭಗಳಲ್ಲಿ ಸಂಸ್ಕರಿಸದ ತ್ಯಾಜ್ಯ ನೀರನ್ನು ನೇರವಾಗಿ ನದಿಗಳಿಗೆ ಬಿಡಲಾಗುತ್ತಿದೆ. ಇದರಿಂದ ಜಲಚರಗಳು ಸಾವನ್ನಪ್ಪುತ್ತಿದ್ದು, ಪರಿಸರ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಒಳಚರಂಡಿ ತ್ಯಾಜ್ಯವನ್ನು ನದಿಗಳಿಗೆ ಹರಿಸುವ ಮೂಲಕ ಸರ್ಕಾರವೇ ಮಾಲಿನ್ಯಕ್ಕೆ ದಾರಿಕೊಡುತ್ತಿರುವುದು ಖಂಡನೀಯ. ತಕ್ಷಣವೇ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ನದಿಗಳ ಮಾಲಿನ್ಯ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.