ಮಂಗಳೂರು: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ರಕ್ತದಾನ ಮತ್ತು ವಿಪತ್ತು ನಿರ್ವಹಣೆಯಂತಹ ಉದಾತ್ತ ಕಾರ್ಯಗಳಲ್ಲಿ ತೊಡಗಿರುವ ರೆಡ್‌ಕ್ರಾಸ್ ಸಂಸ್ಥೆಯು ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟರು.
ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಯೂತ್ ರೆಡ್‌ಕ್ರಾಸ್ ಸಹಯೋಗದಲ್ಲಿ ನಗರದ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ರೆಡ್‌ಕ್ರಾಸ್ ದಿನಾಚರಣೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಡವರಿಗೆ ತುರ್ತು ಸಂದರ್ಭದಲ್ಲಿ ಉಚಿತವಾಗಿ ರಕ್ತ ಪೂರೈಸಲು ಜಿಲ್ಲಾ ಘಟಕ ಮುಂದಾಗಿದ್ದು, ಈ ಮಾನವೀಯ ಸೇವೆಗೆ ಸಾರ್ವಜನಿಕ ಸಂಘ-ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಕೈಜೋಡಿಸಬೇಕು ಎಂದು ಅವರು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಡ್‌ಕ್ರಾಸ್ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಡೆದ ಯೂತ್ ರೆಡ್‌ಕ್ರಾಸ್ ವಿಚಾರ ಸಂಕಿರಣದಲ್ಲಿ ಸುರತ್ಕಲ್ ಎನ್‌ಐಟಿಕೆಯ ಸಹ ಪ್ರಾಧ್ಯಾಪಕಿ ಡಾ. ರಶ್ಮಿ ಸುಧೀರ್ ಉಚ್ಚಿಲ್ ಮತ್ತು ಡಿ-ಅಡಿಕ್ಷನ್ ಸಮಾಲೋಚಕಿ ಡಾ. ಕುಸುಮ್ ತಂತ್ರಿ ಡೆಸಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಬಿ. ಸಚ್ಚಿದಾನಂದ ರೈ, ಖಜಾಂಜಿ ಗುರುದತ್ ನಾಯಕ್, ನಿರ್ದೇಶಕರಾದ ಡಾ. ಸತೀಶ್ ರಾವ್, ಪಿ. ಬಿ. ಹರೀಶ್ ರೈ ಹಾಗೂ ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ಯೂತ್ ರೆಡ್‌ಕ್ರಾಸ್ ಉಪ ಸಮಿತಿ ನಿರ್ದೇಶಕಿ ಡಾ. ಸುಮನ ಬಿ. ಸ್ವಾಗತಿಸಿದರು ಮತ್ತು ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್. ವಂದಿಸಿದರು. ರಕ್ಷಾ ಕಾರ್ಯಕ್ರಮ ನಿರೂಪಿಸಿದರು.
ವಿಚಾರ ಸಂಕಿರಣದ ಅಂಗವಾಗಿ ನಡೆದ ವಿಚಾರ ಮಂಡನೆ ಸ್ಪರ್ಧೆಯಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುನೈನಾ ಪ್ರಥಮ ಸ್ಥಾನ ಗಳಿಸಿದರೆ, ಮಂಗಳೂರು ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜಿನ ಝೀನತ್ ಝುಲ್ಫಾ ದ್ವಿತೀಯ ಹಾಗೂ ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೌಶಿಕ್ ತೃತೀಯ ಸ್ಥಾನ ಪಡೆದುಕೊಂಡರು. ವಿವಿಧ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.