image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಡಿಯುವ ನೀರಿನ ಯೋಜನೆಗಳಿಗೆ ವಿಳಂಬವಿಲ್ಲದೆ ವಿದ್ಯುತ್ ಸಂಪರ್ಕ ನೀಡಲು ಸ್ಪೀಕರ್ ಯು.ಟಿ. ಖಾದರ್ ಸೂಚನೆ

ಕುಡಿಯುವ ನೀರಿನ ಯೋಜನೆಗಳಿಗೆ ವಿಳಂಬವಿಲ್ಲದೆ ವಿದ್ಯುತ್ ಸಂಪರ್ಕ ನೀಡಲು ಸ್ಪೀಕರ್ ಯು.ಟಿ. ಖಾದರ್ ಸೂಚನೆ

ಮಂಗಳೂರು: ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಗುರುವಾರ ಪ್ರಜಾ ಸೌಧದಲ್ಲಿ ನಡೆದ ಉಳ್ಳಾಲ ತಾಲೂಕು ಬರ ನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ, ಬೋರ್‌ವೆಲ್ ಕೊರೆಯಲಾಗಿದ್ದರೂ ಕೇವಲ ವಿದ್ಯುತ್ ಸಂಪರ್ಕದ ವಿಳಂಬದಿಂದಾಗಿ ಸಾರ್ವಜನಿಕರಿಗೆ ನೀರು ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡೆಪಾಸಿಟ್ ಮೊತ್ತಕ್ಕಾಗಿ ಕಾಯದೆ ತಕ್ಷಣವೇ ಸಂಪರ್ಕ ನೀಡಬೇಕು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್‌ಗೆ ಅನುದಾನ ಬಂದಾಗ ಈ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳುವಂತೆ ಅವರು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಕುಡಿಯುವ ನೀರಿನ ಯೋಜನೆಗಳು ಮುಂದಿನ 30 ವರ್ಷಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಯಾಗಬೇಕು. ಒಂದು ವೇಳೆ ಪೈಪ್ ಮೂಲಕ ನೀರು ಪೂರೈಕೆ ಸಾಧ್ಯವಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.

ಮುಂಬರುವ ಮಳೆಗಾಲದ ಸಿದ್ಧತೆಗಳ ಬಗ್ಗೆಯೂ ಚರ್ಚಿಸಿದ ಸ್ಪೀಕರ್, ಚರಂಡಿಗಳ ಹೂಳೆತ್ತುವ ಕಾರ್ಯ ಚುರುಕಾಗಬೇಕು ಮತ್ತು ಕಳೆದ ವರ್ಷ ಪ್ರಾಕೃತಿಕ ವಿಕೋಪ ಸಂಭವಿಸಿದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಯಾವುದೇ ದುರಂತ ಸಂಭವಿಸಿದರೆ ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಅವರು ಎಚ್ಚರಿಸಿದರು. ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯತ್ ಸಿಇಒ ವಿನಾಯಕ್ ಕಾರ್ಭರಿ ಮಾತನಾಡಿ, ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಹೆಚ್ಚುವರಿ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 12 ಲಕ್ಷ ರೂಪಾಯಿ ಲಭ್ಯವಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ಸದಾಶಿವ ಮತ್ತು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ