image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಿ.ಟಿ.ಟಿ.ಸಿ. ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಾತಿ ಆರಂಭ: ಮೇ 13 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಜಿ.ಟಿ.ಟಿ.ಸಿ. ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಾತಿ ಆರಂಭ: ಮೇ 13 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಮಂಗಳೂರು : ನಗರದ ಬೈಕಂಪಾಡಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (GTTC) 2026-27ನೇ ಸಾಲಿನ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಪ್ರಸ್ತುತ ಜಿ.ಟಿ.ಟಿ.ಸಿ ಕೇಂದ್ರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಡಿಯಲ್ಲಿ ಬರುವ 'ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್' ಹಾಗೂ 'ಡಿಪ್ಲೋಮಾ ಇನ್ ಪ್ರೆಸಿಷನ್ ಮ್ಯಾನುಫ್ಯಾಕ್ಚರಿಂಗ್' ಕೋರ್ಸ್‌ಗಳು ಲಭ್ಯವಿವೆ. ಇದರೊಂದಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದಡಿ 'ಡಿಪ್ಲೋಮಾ ಇನ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್' ಕೋರ್ಸ್‌ಗೂ ಪ್ರವೇಶ ಪಡೆಯಬಹುದಾಗಿದೆ ಎಂದು GTTC ಪ್ರಾಂಶುಪಾಲ ಲಕ್ಷ್ಮೀನಾರಾಯಣ ಸಿ ಆರ್ ಪತ್ರಿಕಾಭಾವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

​ಒಟ್ಟು ನಾಲ್ಕು ವರ್ಷಗಳ ಅವಧಿಯ ಈ ಕೋರ್ಸ್‌ಗಳಲ್ಲಿ, ಮೊದಲ ಮೂರು ವರ್ಷ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ನಾಲ್ಕನೇ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಕೈಗಾರಿಕೆಗಳಿಗೆ ಒಂದು ವರ್ಷದ ಕಡ್ಡಾಯ ಇಂಟರ್ನ್‌ಶಿಪ್‌ಗಾಗಿ ಕಳುಹಿಸಿಕೊಡಲಾಗುವುದು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಪ್ರತಿ ತಿಂಗಳು 18,000 ರೂ.ನಿಂದ 23,000 ರೂ.ವರೆಗೆ ಸ್ಟೈಪೆಂಡ್ ಪಡೆಯುವ ಅವಕಾಶವಿದೆ. ಜಿ.ಟಿ.ಟಿ.ಸಿ.ಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಈಗಾಗಲೇ ಭಾರತ ಹಾಗೂ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ ಎಂಬುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಸೌಲಭ್ಯವೂ ದೊರೆಯಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ ಎಂದರು.

​ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 13, 2026 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೈಕಂಪಾಡಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಜಿ.ಟಿ.ಟಿ.ಸಿ. ಕಾಲೇಜನ್ನು ಅಥವಾ ಮೊಬೈಲ್ ಸಂಖ್ಯೆಗಳಾದ 9008263660, 7899070548, 9741490625 ಹಾಗೂ 0824-2408003 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಉಪನ್ಯಾಸಕರಾದ ಹೇಮಂತ್ ಕುಮಾರ್, ಸಂಧ್ಯಾ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ