ಮಂಗಳೂರು: ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ ಭರವಸೆಗಳು ಈವರೆಗೂ ಈಡೇರದಿರುವುದನ್ನು ಆಮ್ ಆದ್ಮಿ ಪಾರ್ಟಿಯ ದಕ್ಷಿಣ ಕನ್ನಡ ಘಟಕವು ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿಯಾನ್ ತಿಳಿಸಿದರು. ಕಳೆದ ಜನವರಿ 10, 2026 ರಂದು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಹೂಡಿಕೆದಾರರ ಸಭೆಯನ್ನುದ್ದೇಶಿಸಿ ಮಾತನಾಡಿ, ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಹಾಗೂ ಬೃಹತ್ ಮೂಲಸೌಕರ್ಯಗಳನ್ನು ಒದಗಿಸುವುದಾಗಿ ಘೋಷಿಸಿದ್ದರು. ಆದರೆ ಈವರೆಗೂ ಅಂತಹ ಯಾವುದೇ ನೀತಿಯ ಕರಡು ವಿಧಾನಸಭೆಯಲ್ಲಿ ಪ್ರಸ್ತಾಪವಾಗದಿರುವುದು ವಿಷಾದನೀಯ ಎಂದರು.
ಸ್ಥಳೀಯ ಪುರಸಭೆಗಳು ಮತ್ತು ಪಂಚಾಯತ್‌ಗಳು ಘನತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಇದು ಪ್ರವಾಸೋದ್ಯಮದ ಬೆಳವಣಿಗೆಗೆ ಮಾರಕವಾಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆ ನೀಡಲಾಗಿದ್ದರೂ, ವಾಸ್ತವದಲ್ಲಿ ಇದು ಕೇವಲ ರಿಯಲ್ ಎಸ್ಟೇಟ್ ಲಾಬಿಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವಂತೆ ಭಾಸವಾಗುತ್ತಿದೆ. ಅಭಿವೃದ್ಧಿಯ ನೆಪದಲ್ಲಿ ಕರಾವಳಿಯ ನೈಸರ್ಗಿಕ ಸಂಪತ್ತಾದ ಕಾಂಡ್ಲಾ (ಮ್ಯಾಂಗ್ರೋವ್) ಪ್ರದೇಶಗಳು ಮತ್ತು ಹಸಿರು ಹೊದಿಕೆ ನಾಶವಾಗುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಅಲ್ಲದೆ, ಸಿ.ಆರ್.ಜೆಡ್ (CRZ) ನಿಯಮಗಳ ಉಲ್ಲಂಘನೆಯ ವರದಿಗಳು ಸಹ ಹೆಚ್ಚಾಗುತ್ತಿವೆ ಎಂದು ದೂರಿದರು.
ಇದಲ್ಲದೆ, ಹೋಂಸ್ಟೇಗಳಿಗೆ ಪರವಾನಗಿ ನೀಡುವ ಮತ್ತು ಅವುಗಳ ನವೀಕರಣ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತವು ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಸ್ಥಳೀಯ ಸಣ್ಣ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ಜಿಲ್ಲಾಡಳಿತವು ತುರ್ತಾಗಿ ಬಗೆಹರಿಸಬೇಕೆಂದು ಪಕ್ಷವು ಒತ್ತಾಯಿಸಿದೆ. ಕರಾವಳಿ ಕರ್ನಾಟಕದ ನೈಜ ಅಭಿವೃದ್ಧಿಗಾಗಿ ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು, ಸುಸ್ಥಿರ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಬೇಕೆಂದು ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಘಟಕ ಪತ್ರಿಕಾಭಾವನದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿಯಾನ್ ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಎಸ್ ಎಲ್ ಪಿಂಟೋ, ವಾಸುದೇವ್, ಶಾಲೆಟ್ ಪಿಂಟೋ, ಸುಜಾತಾ ಯತೀಶ್ ಮತ್ತು ಕಬೀರ್ ಕಾಟಿಪಳ್ಳ ಉಪಸ್ಥಿತರಿದ್ದರು.