ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಪಂ. ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ವರ್ಗದ ಉದ್ಘಾಟನಾ ಸಮಾರಂಭವು ಗಂಜಿಮಠ ಬಳಿಯ ಒಡ್ಡೂರು ಫಾರ್ಮ್ಸ್‌ನಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಐತಿಹಾಸಿಕ ಸಾಧನೆಗಳು ಮತ್ತು ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಅಗತ್ಯವಿದೆ. ಅದೇ ರೀತಿ, ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಕಾರ್ಯಕರ್ತರು ಸಾರ್ವಜನಿಕರಿಗೆ ವಿಸ್ತಾರವಾಗಿ ಮಾಹಿತಿ ನೀಡಬೇಕು ಎಂದು ಕರೆ ನೀಡಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಾತನಾಡಿ, ಇಂತಹ ಪ್ರಶಿಕ್ಷಣ ವರ್ಗಗಳು ಕೇವಲ ಶಿಸ್ತನ್ನು ಕಲಿಸುವುದಲ್ಲದೆ, ಪಕ್ಷದ ಸಿದ್ಧಾಂತವನ್ನು ಅರ್ಥೈಸಿಕೊಂಡು ಸಮರ್ಥ ಕಾರ್ಯಕರ್ತರನ್ನು ಮತ್ತು ನಾಯಕರನ್ನು ರೂಪುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಎರಡು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಪಕ್ಷದ ಸಂಘಟನೆ, ಮುಂದಿನ ಚಟುವಟಿಕೆಗಳು ಹಾಗೂ ಸಿದ್ಧಾಂತಗಳ ಕುರಿತು ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಮತ್ತು ಯತೀಶ್ ಆರ್ವಾರ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ ಹಾಗೂ ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು. ಅಲ್ಲದೆ ರಾಜ್ಯ ಕಾರ್ಯಕಾರಿಣಿ ಸದಸ್ಯ ನಿತಿನ್ ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಮತ್ತು ಮಂಡಲದ ಪದಾಧಿಕಾರಿಗಳು, ಮೋರ್ಚಾಗಳು, ಪ್ರಕೋಷ್ಠಗಳು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್ ಮಟ್ಟದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.