ಮೂಡುಬಿದಿರೆ : ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಮೊದಲ 10 ರ‍್ಯಾಂಕ್‌ಗಳ ಒಳಗೆ ಸ್ಥಾನ ಪಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ 103 ವಿದ್ಯಾರ್ಥಿಗಳು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 50ಕ್ಕಿಂತ ಕಡಿಮೆ ಅಂಕ ಗಳಿಸಿ, ಈಗ ಪಿಯುಸಿಯಲ್ಲಿ ಶೇ. 95ಕ್ಕಿಂತ ಅಧಿಕ ಅಂಕ ಪಡೆದ ಅಪ್ರತಿಮ ಸಾಧಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನುಡಿಸಿರಿ ಸಭಾಂಗಣದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು, ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಯಲ್ಲದೆ ಸಂಸ್ಥೆಯ ಶಿಸ್ತು, ಹೋರಾಟದ ಮನೋಭಾವ ಮತ್ತು ಕೂಡಿ ಬಾಳುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಮಾಜದ ರಾಯಭಾರಿಗಳಾಗಬೇಕು ಎಂದು ಕರೆ ನೀಡಿದರು. ಆಳ್ವಾಸ್ ಸಂಸ್ಥೆಯು 'ಮಿನಿ ಇಂಡಿಯಾ'ದಂತೆ ವಿವಿಧ ಸಂಸ್ಕೃತಿಗಳ ಸಂಗಮವಾಗಿದ್ದು, ಇಲ್ಲಿನ ಒಗ್ಗಟ್ಟಿನ ಸಂದೇಶವನ್ನು ಜಗತ್ತಿಗೆ ಸಾರುವಂತೆ ಅವರು ಆಶಿಸಿದರು. ಇದೇ ವೇಳೆ ಸಂಸ್ಥೆಯ ಶೈಕ್ಷಣಿಕ ವಿಸ್ತರಣೆಯ ಭಾಗವಾಗಿ ಈ ವರ್ಷದಿಂದಲೇ ಎಂಬಿಬಿಎಸ್ ಕೋರ್ಸ್ ಪ್ರಾರಂಭಿಸಲಾಗುವುದು ಎಂಬ ಮಹತ್ವದ ಘೋಷಣೆ ಮಾಡಿದರು. ಸಾಧಕ ವಿದ್ಯಾರ್ಥಿನಿಯರಾದ ವಾಣಿಜ್ಯ ವಿಭಾಗದ ದಿಶಾಳಿಗೆ 3 ಲಕ್ಷ ರೂ. ಹಾಗೂ ವಿಜ್ಞಾನ ವಿಭಾಗದ ರಕ್ಷಿತಾ ಮಂಜುನಾಥ್‌ಗೆ 2 ಲಕ್ಷ ರೂ. ನಗದು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಹಾಗೂ ಗಣ್ಯರು ಉಪಸ್ಥಿತರಿದ್ದರು.