ಬೆಂಗಳೂರು: ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಜಯ ದಾಖಲಿಸಿದೆ. ಬಿಜೆಪಿಯು ಕೋಮುವಾದಿ ಪಕ್ಷಗಳೊಂದಿಗೆ ಕೈಜೋಡಿಸಿ ಕಾಂಗ್ರೆಸ್ ವಿರೋಧಿ ಅಲೆ ಸೃಷ್ಟಿಸಲು ಯತ್ನಿಸಿದರೂ, ಮತದಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಯೋಜನೆಗಳ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಅನ್ನು ಕೈಹಿಡಿದಿದ್ದಾರೆ. ಈ ಗೆಲುವು ರಾಜ್ಯದಲ್ಲಿ ಬಿಜೆಪಿ ಇನ್ನು ಮುಂದೆ ಅಧಿಕಾರಕ್ಕೆ ಬರಲಾರದು ಎಂಬ ಸ್ಪಷ್ಟ ಮುನ್ಸೂಚನೆಯಾಗಿದ್ದು, ಭವಿಷ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಹರ್ಷ ವ್ಯಕ್ತಪಡಿಸಿದ್ದಾರೆ. ವಿಜಯೀ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ಅವರು ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಇದೇ ವೇಳೆ ಕೇರಳ ವಿಧಾನಸಭೆ ಚುನಾವಣೆಯಲ್ಲಿಯೂ ಯುಡಿಎಫ್ (UDF) ಮೈತ್ರಿಕೂಟವು ಭರ್ಜರಿ ಜಯಭೇರಿ ಬಾರಿಸಿದೆ. ಕೇರಳದಲ್ಲಿ ಸತತ 18 ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಐವನ್ ಡಿ’ಸೋಜಾ ಅವರು, ಅಲ್ಲಿನ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವಿರೋಧಿ ನೀತಿಯಿಂದ ಬೇಸತ್ತಿದ್ದ ಜನತೆ ಯುಡಿಎಫ್ ಪರವಾಗಿ ನಿಂತಿದ್ದಾರೆ ಎಂದು ತಿಳಿಸಿದ್ದಾರೆ. ಕೇರಳದ ಜನತೆಯ ನಾಡಿಮಿಡಿತ ಅರಿತಿದ್ದ ನಮಗೆ ಈ ಗೆಲುವು ನಿರೀಕ್ಷಿತವಾಗಿತ್ತು ಎಂದು ಹೇಳಿರುವ ಅವರು, ಕೇರಳದ ಮತದಾರರಿಗೆ ಮತ್ತು ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಅರ್ಪಿಸಿದ್ದಾರೆ.