image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ: 3000 ಕೆಜಿ ತ್ಯಾಜ್ಯ ವಿಲೇವಾರಿ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ: 3000 ಕೆಜಿ ತ್ಯಾಜ್ಯ ವಿಲೇವಾರಿ

ಮಂಗಳೂರು : ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಮೇ ತಿಂಗಳ ಸ್ವಚ್ಛತಾ ಶ್ರಮದಾನವು ಅತ್ಯಂತ ಯಶಸ್ವಿಯಾಗಿ ಜರುಗಿತು. ರೋಸಾರಿಯೋ ಚರ್ಚ್ ಮುಖ್ಯಸ್ಥರಾದ ಫಾ. ವಲೇರಿಯನ್ ಡಿ'ಸೋಜಾ ಹಾಗೂ ಎಂ.ಆರ್.ಪಿ.ಎಲ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ.ಎಚ್.ವಿ. ಪ್ರಸಾದ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಎಂ.ಆರ್.ಪಿ.ಎಲ್‌ನ ಕೇಶವ ಪಟ್ಟಾಳಿ, ನಿವೃತ್ತ ಸೇನಾನಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಸ್ವಯಂಸೇವಕರನ್ನು ಹುರಿದುಂಬಿಸಿದರು.  

​ಈ ಸಂದರ್ಭದಲ್ಲಿ ಮಾತನಾಡಿದ ಫಾ. ವಲೇರಿಯನ್ ಡಿ'ಸೋಜಾ ಅವರು ನಗರವನ್ನು ಸ್ವಚ್ಛವಾಗಿಡಲು ಯುವಜನತೆ ತೋರುತ್ತಿರುವ ಆಸಕ್ತಿ ಮತ್ತು ಸಮಯದ ಕೊಡುಗೆಯನ್ನು ಶ್ಲಾಘಿಸಿದರು. ಶ್ರೀ ಬಿ.ಎಚ್.ವಿ. ಪ್ರಸಾದ್ ಅವರು ಪರಿಸರ ಜವಾಬ್ದಾರಿ ಮತ್ತು ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಅಭಿಯಾನದ ಮಹತ್ವವನ್ನು ಒತ್ತಿ ಹೇಳಿದರು. ಅಭಿಯಾನದ ಭಾಗವಾಗಿ ನಿಟ್ಟೆ ಇನ್ಸಿಟ್ಯೂಟ್ ಆಫ್ ಫಿಸಿಯೋಥೆರಪಿಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ರೋಸಾರಿಯೋ ಚರ್ಚ್‌ನಿಂದ ಸೇಂಟ್ ಆನ್ಸ್ ಕಾಲೇಜುವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಕಸ ಸಂಗ್ರಹ, ಪ್ಲಾಸ್ಟಿಕ್ ತೆರವು ಹಾಗೂ ಅನಧಿಕೃತ ಬ್ಯಾನರ್‌ಗಳನ್ನು ಹಟಾಯಿಸುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.  

​ಮತ್ತೊಂದೆಡೆ ಹಿರಿಯ ಸ್ವಯಂಸೇವಕರ ತಂಡವು ರೋಸಾರಿಯೋ ಚರ್ಚ್‌ನಿಂದ ಪೋಸ್ಟ್ ಆಫೀಸ್‌ವರೆಗಿನ ರಸ್ತೆಯಲ್ಲಿದ್ದ 5 ಪ್ರಮುಖ ಬ್ಲ್ಯಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಮಳೆಗಾಲದ ಹಿನ್ನೆಲೆಯಲ್ಲಿ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ಹೂಳೆತ್ತಿ ಶುದ್ಧೀಕರಿಸಲಾಯಿತು. ಒಟ್ಟಾರೆಯಾಗಿ ಎರಡು ತಂಡಗಳ ಶ್ರಮದಿಂದ ಸುಮಾರು 3000 ಕಿಲೋ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.  

​ಇದೇ ವೇಳೆ ರೋಸಾರಿಯೋ ಹಾಲ್‌ನಿಂದ ಸ್ಟೇಟ್ ಬ್ಯಾಂಕ್ ಸಂಪರ್ಕ ರಸ್ತೆಯವರೆಗೆ ಲಾರಿ ಹಾಗೂ ಹಳೆಯ ವಾಹನಗಳ ಅನಧಿಕೃತ ಪಾರ್ಕಿಂಗ್‌ನಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ಭದ್ರತೆಗೆ ತೊಂದರೆಯಾಗುತ್ತಿರುವುದನ್ನು ಸ್ವಯಂಸೇವಕರು ಗಮನಿಸಿದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಥವಾ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ನಗರ ಪಾಲಿಕೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಸ್ವಚ್ಛ ಮಂಗಳೂರು ಪ್ರತಿಷ್ಠಾನ ಹಾಗೂ ಎಂ.ಆರ್.ಪಿ.ಎಲ್ ಸಹಯೋಗದೊಂದಿಗೆ ನಡೆದ ಈ ಸಮೂಹ ಪ್ರಯತ್ನವು ನಾಗರಿಕರಲ್ಲಿ ಜವಾಬ್ದಾರಿಯುತ ಮಂಗಳೂರನ್ನು ನಿರ್ಮಿಸುವ ಆಶಯವನ್ನು ಮೂಡಿಸಿದೆ.  

Category
ಕರಾವಳಿ ತರಂಗಿಣಿ