ಮಂಗಳೂರು : ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹991ಕ್ಕೆ ಏರಿಕೆ ಮಾಡಿರುವುದು ಹಾಗೂ ಪೆಟ್ರೋಲ್-ಡೀಸೆಲ್ ದರವನ್ನು ಹೆಚ್ಚಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ಚುನಾವಣೆಗಳು ಮುಗಿದ ತಕ್ಷಣವೇ ಈ ದರ ಏರಿಕೆ ಮಾಡಿರುವುದು ಬಿಜೆಪಿ ಪಕ್ಷದ ನಿಜಸ್ವರೂಪವನ್ನು ಬಯಲಿಗೆಳೆದಿದ್ದು, ಮತ ಪಡೆಯುವವರೆಗೆ ಸುಮ್ಮನಿದ್ದು ಈಗ ಜನರ ಮೇಲೆ ಬೆಲೆ ಏರಿಕೆಯ ಭಾರ ಹಾಕುತ್ತಿರುವುದು ಕರಾವಳಿ ಭಾಗದ ಜನರಿಗೆ ಮಾಡಿದ ದೊಡ್ಡ ಮೋಸವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ದೇಶದ ಬಡಜನರು ಹಾಗೂ ಕಾರ್ಮಿಕ ವರ್ಗದ ಮೇಲೆ ಇಂತಹ ಹೊರೆ ಹಾಕುತ್ತಿರುವುದು ಅತ್ಯಂತ ಖಂಡನೀಯವಾಗಿದ್ದು, ಈಗಾಗಲೇ ಇಂಧನ ಬೆಲೆ ಏರಿಕೆಯಿಂದ ಅನೇಕ ಹೋಟೆಲ್‌ಗಳು ಹಾಗೂ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಬಿಜೆಪಿ ಸರ್ಕಾರದ ಈ ನಿಲುವುಗಳು ಮಧ್ಯಮ ಮತ್ತು ಕೆಳವರ್ಗದ ಜನರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ದೇಶದ ಆರ್ಥಿಕ ಸ್ಥಿತಿ ಹದಗೆಡಲು ಕೇಂದ್ರದ ತಪ್ಪು ನೀತಿಗಳೇ ಕಾರಣವಾಗಿವೆ ಎಂದು ಅವರು ಆರೋಪಿಸಿದರು. 2023ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವ ಸರ್ಕಾರವು, ರಾಜಕೀಯ ಲಾಭಕ್ಕಾಗಿ ಮಸೂದೆಯನ್ನು ಮಂಡಿಸಿ ಸೋಲನ್ನು ಅನುಭವಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಮಾನ ಎಸಗಿದೆ. ಜನರಿಗೆ 15 ಲಕ್ಷ ರೂಪಾಯಿ ನೀಡುವ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಬಿಜೆಪಿ, ಈಗ ಬೆಲೆ ಏರಿಕೆ ಮಾಡುವ ಮೂಲಕ ಆಟೋ ಚಾಲಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳ ಜೀವನವನ್ನು ಕಷ್ಟಕರವಾಗಿಸಿದೆ. ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಜನರನ್ನು ಒಡೆಯುವ ಕೆಲಸ ಮಾಡುತ್ತಿರುವ ಬಿಜೆಪಿ ನಾಯಕರು ಈ ಗ್ಯಾಸ್ ದರ ಏರಿಕೆ ಕುರಿತು ಜನರಿಗೆ ಕೂಡಲೇ ಸ್ಪಷ್ಟನೆ ನೀಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಐವನ್ ಡಿಸೋಜಾ ಅವರು ಎಚ್ಚರಿಕೆ ನೀಡಿದ್ದಾರೆ.