ಮೂಡುಬಿದಿರೆ: ಅರ್ಹ ಕೌಶಲಗಳನ್ನು ಮೈಗೂಡಿಸಿಕೊಂಡ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿವೆ ಎಂದು ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿವಿಧ ಕಾಲೇಜುಗಳ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ’ ಎಂಬ ವಿಚಾರಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಸೂಕ್ತ ಶಿಕ್ಷಣ ಮತ್ತು ಪ್ರಾಯೋಗಿಕ ತರಬೇತಿ ಪಡೆಯುವುದು ಅತ್ಯಗತ್ಯವಾಗಿದ್ದು, ಧನಾತ್ಮಕ ಧೋರಣೆಯನ್ನು ಬೆಳೆಸುವಲ್ಲಿ ಆಳ್ವಾಸ್ ಕಾಲೇಜಿನ ಮಾಧ್ಯಮ ಶಿಕ್ಷಣವು ವಿಶಿಷ್ಟ ಕೊಡುಗೆ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ನಾರಾಯಣ ಶೆಟ್ಟಿ ಅವರು ಮಾತನಾಡಿ, ಇಂದಿನ ಅನಿವಾರ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳು ಡಿಜಿಟಲ್ ವೇದಿಕೆಗಳಿಗೆ ಅಪ್‌ಡೇಟ್ ಆಗುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು. ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಸಮಕಾಲೀನ ಮಾಧ್ಯಮದ ಅವಶ್ಯಕತೆಗಳ ಬಗ್ಗೆ ವಿವರಿಸಿದರೆ, ಸಂಯೋಜಕ ಹರ್ಷವರ್ಧನ ಪಿ.ಆರ್. ಕಾರ್ಯಕ್ರಮದ ರೂಪುರೇಷೆಗಳನ್ನು ಪರಿಚಯಿಸಿದರು. ವಿಚಾರಸಂಕಿರಣದಲ್ಲಿ ಮುದ್ರಣ, ಟೆಲಿವಿಷನ್, ರೇಡಿಯೊ ಹಾಗೂ ಡಿಜಿಟಲ್ ಮಾಧ್ಯಮಗಳ ಕುರಿತು ತಜ್ಞರಿಂದ ಪ್ರಾಯೋಗಿಕ ತರಗತಿಗಳು ನಡೆದವು. ಸಿದ್ಧಕಟ್ಟೆ ಸರ್ಕಾರಿ ಕಾಲೇಜು, ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಹೊಡೆಯಾಲ, ದೀಕ್ಷಿತಾ, ಅಕ್ಷಯ್ ಕುಮಾರ್ ಹಾಗೂ ಹನ್ನಾ ಫಾತಿಮಾ ತರಬೇತಿ ನೀಡಿದರು. ರಕ್ಷಿತಾ ಚಪ್ಪರಿಕೆ ಮತ್ತು ಪ್ರೇರಣಾ ಕಾರ್ಯಕ್ರಮ ನಿರ್ವಹಿಸಿದರು.