ಧರ್ಮಸ್ಥಳ : ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಸಂಜೆ 6:40 ರ ಶುಭ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಅತ್ಯಂತ ಸಂಭ್ರಮದಿಂದ ನೆರವೇರಿತು. ವೇದಘೋಷ ಹಾಗೂ ಮಂಗಳವಾದ್ಯಗಳ ನಡುವೆ ಒಟ್ಟು 106 ಜೊತೆ ವಧು-ವರರು ಹೊಸ ಜೀವನಕ್ಕೆ ಕಾಲಿಟ್ಟರು. ಈ ಪವಿತ್ರ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 13,100ನೇ ದಂಪತಿಗೆ ಮಂಗಳಸೂತ್ರ ನೀಡಿ ಆಶೀರ್ವದಿಸಿದರು.
ಮೆರವಣಿಗೆ ವಿಡಿಯೋಗಾಗಿ ಕ್ಲಿಕ್ ಮಾಡಿ
ಬುಧವಾರ ಬೆಳಿಗ್ಗೆಯೇ ವಧು-ವರರಿಗೆ ಸಾಂಪ್ರದಾಯಿಕ ಉಡುಗೆ ಹಾಗೂ ಆಭರಣಗಳನ್ನು ವಿತರಿಸಲಾಗಿದ್ದು, ಸಂಜೆ 5:00 ಗಂಟೆಗೆ ದೇವಸ್ಥಾನದ ಬಳಿಯಿಂದ ಭವ್ಯ ಮೆರವಣಿಗೆಯ ಮೂಲಕ ಅವರನ್ನು ಸಭಾಭವನಕ್ಕೆ ಕರೆತರಲಾಯಿತು. ಡಾ. ಹೆಗ್ಗಡೆ ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿದ ಬಳಿಕ, ನಿಗದಿತ ಲಗ್ನದಲ್ಲಿ ಹಾರ ವಿನಿಮಯ ಹಾಗೂ ಮಂತ್ರಾಕ್ಷತೆಯೊಂದಿಗೆ ವಿವಾಹ ಪ್ರಕ್ರಿಯೆಗಳು ಪೂರ್ಣಗೊಂಡವು. ನೂತನ ದಂಪತಿಗಳು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಸವಿದು ಸಾರ್ಥಕ ಭಾವದಿಂದ ತಮ್ಮ ಊರುಗಳಿಗೆ ತೆರಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, "ದಂಪತಿಗಳು ಪರಸ್ಪರ ನಂಬಿಕೆ ಮತ್ತು ಪ್ರೀತಿಯಿಂದ ಹೊಂದಾಣಿಕೆಯ ಜೀವನ ನಡೆಸಬೇಕು," ಎಂದು ಹಿತವಚನ ನೀಡಿದರು. ಮದುವೆಯ ದುಂದುವೆಚ್ಚ ಹಾಗೂ ವರದಕ್ಷಿಣೆ ಪದ್ಧತಿಯನ್ನು ತಡೆಯುವ ಉದ್ದೇಶದಿಂದ 1972ರಲ್ಲಿ 88 ಜೋಡಿಗಳೊಂದಿಗೆ ಆರಂಭವಾದ ಈ ಕ್ರಾಂತಿಕಾರಿ ಯೋಜನೆಯು, ಇಂದು ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದೆ. ಈವರೆಗೆ ಇಲ್ಲಿ ವಿವಾಹವಾದವರಲ್ಲಿ ಒಂದೇ ಒಂದು ವಿಚ್ಛೇದನ ಪ್ರಕರಣ ವರದಿಯಾಗಿಲ್ಲದಿರುವುದು ಈ ಕ್ಷೇತ್ರದ ಪಾವಿತ್ರ್ಯತೆಗೆ ಸಾಕ್ಷಿಯಾಗಿದೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು. ಇದೇ ವೇಳೆ, ಕ್ಷೇತ್ರದ ವಿಶಿಷ್ಟತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಇನ್ನು ಮುಂದೆ ಬೇರೆ ಕಡೆ ನಡೆಯುವ ಸಾಮೂಹಿಕ ವಿವಾಹಗಳಿಗೆ ಕ್ಷೇತ್ರದಿಂದ ಮಂಗಳಸೂತ್ರ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಶಾಸಕ ಹರೀಶ್ ಪೂಂಜ, ಹೇಮಾವತಿ ವೀ. ಹೆಗ್ಗಡೆ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಡಿ. ಹರ್ಷೇಂದ್ರ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರದ್ಧಾ ಅಮಿತ್ ಸ್ವಾಗತಿಸಿ, ಎ.ವಿ. ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಸಮಾರಂಭವು ಸಮಾಜದ ಎಲ್ಲಾ ವರ್ಗದವರಿಗೆ ಸರಳ ವಿವಾಹದ ಮಹತ್ವವನ್ನು ಸಾರುವ ಮೂಲಕ ಮತ್ತೊಮ್ಮೆ ಮಾದರಿಯಾಯಿತು.