ಮಾಣಿಲ: ಗ್ರಾಮದ ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಯನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸಾಧಕರಿಗೆ ಸನ್ಮಾನಿಸುವ ಅದ್ಧೂರಿ ಸಮಾರಂಭವು ಮುರುವದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಮುಂದಾಳು ಹಾಗೂ ಸಂಘದ ಮಾರ್ಗದರ್ಶಕ ಅರುಣ್ ಕುಮಾರ್ ಪುತ್ತಿಲ, ಒಂದು ಗ್ರಾಮದ ಯುವಶಕ್ತಿ ಒಂದೇ ಧ್ಯೇಯದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಅದು ಇಡೀ ಊರಿನ ಮೆಚ್ಚುಗೆಗೆ ಪಾತ್ರವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಸಲಕರಣೆಗಳನ್ನು ಒದಗಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವ ಈ ಸಂಘಟನೆಯ ಕಾರ್ಯವೈಖರಿ ಶ್ಲಾಘನೀಯ. ಇಂತಹ ಉತ್ತಮ ಕಾರ್ಯಗಳಿಗೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲೋಣ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ರೇವತಿ ಪೆರ್ನೆ ಮಾತನಾಡಿ, ಪುಟಾಣಿ ಮಕ್ಕಳಿಂದ ಹಿಡಿದು ಪ್ರೌಢಶಾಲಾ ವಿದ್ಯಾರ್ಥಿಗಳವರೆಗೆ ಪ್ರೋತ್ಸಾಹ ನೀಡುವ ಸಂಘದ ಕಾರ್ಯ ಅತ್ಯದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೋರ್ವ ಅತಿಥಿ ಮಹಾಬಲ ಭಟ್ ಮುರುವ ನಡುಮನೆ ಅವರು ಮಾತನಾಡಿ, ಗ್ರಾಮದಲ್ಲಿ ಶಾಲೆಯನ್ನು ಪ್ರಾರಂಭಿಸಲು ಪಟ್ಟ ಕಷ್ಟಗಳನ್ನು ಮೆಲುಕು ಹಾಕುತ್ತಾ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಠ್ಯೋಪಕರಣಗಳನ್ನು ನೀಡುತ್ತಿರುವ ಸಂಘದ ಉದ್ದೇಶವನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಅಧ್ಯಾಪಕಿ ರೇವತಿ ಕುಕ್ಕಾಜೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಸಂಘದ ಯುವಕರ ಕಾರ್ಯತತ್ಪರತೆಯನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಸಾಧಕರಾದ ಸುದರ್ಶನ್ ತಾರಿದಳ, ಖದೀಜಾ ರಾಶ್ಮಿ ನಾಯರ್ ಮೂಲೆ, ದೀಕ್ಷಾ ಟಿ ತಚ್ಚಮೆ ಹಾಗೂ ಶೈಕ್ಷಣಿಕ ಸಾಧನೆಗೈದ ಶ್ರೇಯಾ ಚೌಟ, ಹಿತಶ್ರೀ ಪಿ, ಆಧ್ಯಶ್ರೀ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮಾಣಿಲ ಗ್ರಾಮದ ಸುಮಾರು 150 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ನವೀನ್ ಕುಮಾರ್ ಕಕ್ವೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸುದೇಶ್ ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಂಕೋಡು ವಂದಿಸಿದರು. ಕು| ಸಿಂಚನ, ಶಮಿಕಾ, ಶ್ರೇಯಾ ಪ್ರಾರ್ಥಿಸಿ, ಸಮೀಕ್ಷಾ, ಹಿತಶ್ರೀ ಮತ್ತು ಶ್ರೇಯಾ ಚೌಟ ವಂದೇ ಮಾತರಂ ಹಾಡಿದರು. ಸಂಘದ ಸದಸ್ಯೆ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.