ಉಜಿರೆ: ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪೂರ್ವಭಾವಿಯಾಗಿ, ವಿವಾಹ ನೋಂದಣಿ ಕಚೇರಿಯನ್ನು ಉಜಿರೆಯ ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಎ.ವಿ. ಶೆಟ್ಟಿ ಅವರು ಕಚೇರಿಯನ್ನು ಉದ್ಘಾಟಿಸಿ, ಈ ವರ್ಷದ ವಿವಾಹ ಕಾರ್ಯಕ್ರಮವು ಅತ್ಯಂತ ಸುಸೂತ್ರವಾಗಿ ಮತ್ತು ಮಂಗಲಕರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಈ ಬಾರಿಯ ಸಾಮೂಹಿಕ ವಿವಾಹವು 2026ರ ಏಪ್ರಿಲ್ 29ರ ಬುಧವಾರ ಸಂಜೆ ಗಂಟೆ 6.40ರ ಶುಭ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆರವೇರಲಿದೆ.
ಈ ಸಂದರ್ಭದಲ್ಲಿ ಶ್ರೀನಿವಾಸ ರಾವ್, ರಜಪೂತ, ವಿಕಾಸ್ ಆರಿಗ, ಧರ್ಣಪ್ಪ ಮಾಸ್ಟರ್, ಶ್ರೀಮತಿ ರತ್ನಾವತಿ, ಮೋಹನ್ ಶೆಟ್ಟಿ, ಸಂತೋಷ್ ಹಾಗೂ ಶ್ರೀಮತಿ ಪವಿತ್ರ ಸುನಿಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ವರ್ಷ ಒಟ್ಟು 106 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ವಿವಾಹದ ಸಂಪೂರ್ಣ ವೆಚ್ಚವನ್ನು ಧರ್ಮೋತ್ಥಾನ ಟ್ರಸ್ಟ್ ಭರಿಸಲಿದೆ. ವಿವಾಹವಾಗಲಿಚ್ಛಿಸುವ ಅರ್ಹ ವಧು-ವರರು ನೂತನವಾಗಿ ಆರಂಭವಾಗಿರುವ ಈ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.