ಮಂಗಳೂರು: ನಗರದ ಹೊರವಲಯದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ 'ಶೂನ್ಯ ನೆರಳಿನ ದಿನ'ದ ಅಂಗವಾಗಿ ವಿಶೇಷ ಪ್ರಾತ್ಯಕ್ಷಿಕೆ ಹಾಗೂ ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭೂಮಿಯ ಅಕ್ಷದ ಓರೆ ಹಾಗೂ ಸೂರ್ಯನ ಪಥ ಬದಲಾವಣೆಯಿಂದಾಗಿ ವರ್ಷಕ್ಕೆ ಎರಡು ಬಾರಿ ಸಂಭವಿಸುವ ಈ ಅಪರೂಪದ ಖಗೋಳ ವಿದ್ಯಮಾನವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಅಡ್ಯಾರ್ ಕೇಂಬ್ರಿಡ್ಜ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿ, ವಿಜ್ಞಾನ ಕೇಂದ್ರದ ತಜ್ಞರಿಂದ ವಿಷಯದ ಬಗ್ಗೆ ಮಾಹಿತಿ ಪಡೆದರು. ಸೋಲಾರ್ ಫಿಲ್ಟರ್ ಅಳವಡಿಸಿದ ವಿಶೇಷ ದೂರದರ್ಶಕದ ಮೂಲಕ ಸೂರ್ಯನ ಮೇಲ್ಮೈನಲ್ಲಿರುವ ಸೌರಕಲೆಗಳನ್ನು (Sunspots) ವೀಕ್ಷಿಸಲು ವೀಕ್ಷಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.
ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯ ಹಾಗೂ ಚೆನ್ನೈನ ಪೆರಿಯಾರ್ ವಿಜ್ಞಾನ ಮತ್ತು ತಂತ್ರಜ್ಞಾನ ಮ್ಯೂಸಿಯಂನಂತಹ ಪ್ರಮುಖ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿತವಾಗಿತ್ತು. ಈ ವೇಳೆ ಕೇವಲ ನೆರಳು ಮಾಯವಾಗುವುದನ್ನು ನೋಡುವುದಷ್ಟೇ ಅಲ್ಲದೆ, ವೈಜ್ಞಾನಿಕ ಪ್ರಯೋಗಗಳ ಮೂಲಕ ಭೂಮಿಯ ಸುತ್ತಳತೆ, ಭೂಮಿಯ ಭ್ರಮಣ ವೇಗ ಮತ್ತು ನೈಜ ಉತ್ತರ ದಿಕ್ಕನ್ನು (True North) ಪತ್ತೆಹಚ್ಚುವ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಕೇಂದ್ರದ ಕ್ಯುರೇಟರ್ ಜಗನ್ನಾಥ್ ಮತ್ತು ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಅವರು ಪ್ರಾತ್ಯಕ್ಷಿಕೆಗಳನ್ನು ಮುನ್ನಡೆಸಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು ಎಂದು ಕೇಂದ್ರದ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.