ಮಂಗಳೂರು: ವಿಶ್ವ ಪಶು ವೈದ್ಯಕೀಯ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಪಶು ವೈದ್ಯಕೀಯ ಸಂಘದ ದಕ್ಷಿಣ ಕನ್ನಡ ಘಟಕ, ಫೀಡ್ ಅನಿಮಲ್ಸ್ ಸೇವ್ ಅನಿಮಲ್ಸ್ ಟ್ರಸ್ಟ್ ಮತ್ತು ಅಸ್ಟ್ರಾ ಫೌಂಡೇಶನ್ ಸಹಯೋಗದೊಂದಿಗೆ ಉಳ್ಳಾಲ ತಾಲೂಕಿನ ಮಂಡ್ಯರಿನಲ್ಲಿ ಸಾಕು ಪ್ರಾಣಿಗಳು ಹಾಗೂ ಬೀದಿ ನಾಯಿಗಳಿಗೆ ಉಚಿತ ರೇಬಿಸ್ ರೋಗನಿರೋಧಕ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ರೇಬಿಸ್ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಅತ್ಯಂತ ಅವಶ್ಯಕವಾಗಿವೆ. ಪ್ರಾಣಿಗಳಿಂದ ಹರಡುವ ರೋಗಗಳ ತಡೆಗಟ್ಟುವಿಕೆಗೆ ಸಾರ್ವಜನಿಕರು ಹೆಚ್ಚಿನ ಒತ್ತು ನೀಡಬೇಕು ಮತ್ತು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಜನಜಾಗೃತಿ ಕೆಲಸಗಳು ನಡೆಯಬೇಕಿದೆ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಕ್ಷಿಣ ಕನ್ನಡ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಅರುಣ್ ಕುಮಾರ್ ಶೆಟ್ಟಿ ಅವರು, ವಿಶ್ವ ಪಶು ವೈದ್ಯಕೀಯ ದಿನಾಚರಣೆಯ ಹಿನ್ನೆಲೆ ಹಾಗೂ ಪ್ರಾಣಿಗಳಲ್ಲಿ ರೇಬಿಸ್ ರೋಗ ಕಾಣಿಸಿಕೊಳ್ಳದಂತೆ ತಡೆಯಲು ಲಸಿಕೆ ಹಾಕಿಸುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ಈ ಸಂದರ್ಭದಲ್ಲಿ ಫೀಡ್ ಅನಿಮಲ್ಸ್ ಸೇವ್ ಅನಿಮಲ್ಸ್ ಟ್ರಸ್ಟ್‌ನ ರಜನಿ ಶೆಟ್ಟಿ, ಅಸ್ಟ್ರಾ ಫೌಂಡೇಶನ್‌ನ ಲಾಂಛುಲಾಲ್, ಕರ್ನಾಟಕ ಪಶು ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ. ಚಂದ್ರಶೇಖರ್ ಭಟ್, ಕಾರ್ಯದರ್ಶಿ ಡಾ. ನಿತಿನ್ ಪ್ರಭು, ಸ್ಥಳೀಯ ಮಹಾನಗರಪಾಲಿಕೆ ಸದಸ್ಯ ಹರೀಶ್ ರಾವ್ ಸೇರಿದಂತೆ ಪಶು ವೈದ್ಯಕೀಯ ಸಂಘದ ಸದಸ್ಯರು ಹಾಗೂ ಶ್ವಾನಪ್ರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಸಾಕು ನಾಯಿಗಳು, ಬೆಕ್ಕುಗಳು ಹಾಗೂ ಬೀದಿ ನಾಯಿಗಳಿಗೆ ಲಸಿಕೆ ನೀಡಲಾಯಿತು.