ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ತು ಹಾಗೂ ಮಂಗಳೂರು ಮಹಾನಗರ ಆಟೋರಿಕ್ಷಾ ಚಾಲಕರ-ಮಾಲೀಕರ ಸಂಘದ ವತಿಯಿಂದ 2026ರ ಮೇ 1ರಂದು "ಕಾರ್ಮಿಕ ದಿನಾಚರಣೆ"ಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಐವನ್ ಡಿಸೋಜಾ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಈ ಸಮಾರಂಭದಲ್ಲಿ ಕಾರ್ಮಿಕರಿಗೆ ಸನ್ಮಾನ ಹಾಗೂ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯರು ಹಾಗೂ ಕಾರ್ಮಿಕ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಐವನ್ ಡಿಸೋಜಾ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ. ರವಿಶಂಕರ್ ಅವರು ಆಗಮಿಸಲಿದ್ದಾರೆ.
ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಕಾರ್ಮಿಕ ಅಧಿಕಾರಿ (ವಿಭಾಗ-2) ಶ್ರೀಮತಿ ವಿಲ್ಮಾ ತೌರೋ ಅವರು ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮವು ಮಂಗಳೂರಿನ ಹಂಪನಕಟ್ಟೆಯ ತಾಜ್ ಮಹಲ್ ಆಟೋ ಪಾರ್ಕ್ ನಲ್ಲಿ ಬೆಳಿಗ್ಗೆ 10:30ಕ್ಕೆ ಪ್ರಾರಂಭವಾಗಲಿದೆ. ಸಂಘಟನೆಯ ಪರವಾಗಿ ಎಲ್ಲಾ ಕಾರ್ಮಿಕ ಬಾಂಧವರು ಆಗಮಿಸಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ಕುಮಾರ್, ರಾಜೇಶ್, ಇಸ್ಮಾಯಿಲ್, ಮ್ಯಾಕ್ಸಿ ಮಿರಾಂಡ ಮತ್ತು ಅನಿಲ್ ಲೋಬೋ ಉಪಸ್ಥಿತರಿದ್ದರು.