image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ನಾಳೆ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಂಭ್ರಮ

ಧರ್ಮಸ್ಥಳದಲ್ಲಿ ನಾಳೆ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಂಭ್ರಮ

ಧರ್ಮಸ್ಥಳ : ಸರ್ವಧರ್ಮ ಸಮನ್ವಯ ಕೇಂದ್ರವಾದ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆ ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಜರುಗಲಿದೆ. ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆ ಮತ್ತು ಮದುವೆಯ ದುಂದುವೆಚ್ಚವನ್ನು ತಡೆಯುವ ಉದಾತ್ತ ಉದ್ದೇಶದಿಂದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಆರಂಭಿಸಿದ ಈ ಯೋಜನೆಯು ಇಂದು ನಾಡಿಗೆ ಮಾದರಿಯಾಗಿದೆ.

​ಈ ಬಾರಿ ಒಟ್ಟು 105 ಜೊತೆ ವಧು-ವರರು ವಿವಾಹಕ್ಕಾಗಿ ನೋಂದಾಯಿಸಿಕೊಂಡಿದ್ದು, ಅಗತ್ಯ ದಾಖಲೆಗಳ ಪರಿಶೀಲನೆಯ ನಂತರ ಅವರಿಗೆ ವಿವಾಹವಾಗಲು ಅವಕಾಶ ಕಲ್ಪಿಸಲಾಗುವುದು. ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ ಮತ್ತು ಪುಷ್ಪಹಾರಗಳನ್ನು ಕ್ಷೇತ್ರದಿಂದಲೇ ಒದಗಿಸಲಾಗುತ್ತದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮದುವೆಯ ಸಂಪೂರ್ಣ ವೆಚ್ಚವನ್ನು ಭರಿಸಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಎ.ವಿ. ಶೆಟ್ಟಿ ಮಾಹಿತಿ ನೀಡಿದ್ದಾರೆ.

​ಕಳೆದ ವರ್ಷದವರೆಗೆ ಸುಮಾರು 13000ಕ್ಕೂ ಅಧಿಕ ಜೋಡಿಗಳು ಈ ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ-ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಬುಧವಾರ ಸಂಜೆ ನಡೆಯುವ ಈ ವಿವಾಹ ಮಹೋತ್ಸವವು ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಶಾಸಕ ಹರೀಶ್ ಪೂಂಜ ಮತ್ತು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರು ಉಪಸ್ಥಿತರಿದ್ದು, ನೂತನ ದಂಪತಿಗಳಿಗೆ ಆಶೀರ್ವದಿಸಿ ಶುಭ ಹಾರೈಸಲಿದ್ದಾರೆ.

Category
ಕರಾವಳಿ ತರಂಗಿಣಿ