ಮಂಗಳೂರು: ನಗರದ ಮಿಲಾಗ್ರಿಸ್ ಕಾಲೇಜು, ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯ ಹಾಗೂ ಮಂಗಳೂರು ರನ್ನರ್ಸ್ ಕ್ಲಬ್ ಇವರುಗಳ ಜಂಟಿ ಆಶ್ರಯದಲ್ಲಿ ‘ಅಪೆಕ್ಸ್ ರನ್ 2026’ ಮ್ಯಾರಥಾನ್ ಓಟವನ್ನು ಇದೇ ಬರುವ ಮೇ 10ರಂದು ಹಮ್ಮಿಕೊಳ್ಳಲಾಗಿದೆ ಎಂದು ಫಾ. ಆಲ್ವಿನ್ ಸೆರಾವೋ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,
ಅಂದು ಬೆಳಿಗ್ಗೆ 5:00 ಗಂಟೆಗೆ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಈ ಓಟಕ್ಕೆ ಚಾಲನೆ ಸಿಗಲಿದ್ದು, ಸುಮಾರು 2500ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.
ದೈಹಿಕ ಕ್ಷಮತೆ, ಆರೋಗ್ಯ ಜಾಗೃತಿ ಮತ್ತು ಯುವಜನರಲ್ಲಿ ಸಮುದಾಯದ ಒಗ್ಗಟ್ಟನ್ನು ಉತ್ತೇಜಿಸುವ ಉದ್ದೇಶದಿಂದ ಈ ನಗರ ಮಟ್ಟದ ಮ್ಯಾರಥಾನ್ ಆಯೋಜಿಸಲಾಗಿದೆ. 176 ವರ್ಷಗಳ ಸುದೀರ್ಘ ಇತಿಹಾಸವಿರುವ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಘಟಕವಾದ ಮಿಲಾಗ್ರಿಸ್ ಕಾಲೇಜು, ಗುಣಮಟ್ಟದ ಶಿಕ್ಷಣದೊಂದಿಗೆ ಇಂತಹ ಸಾಮಾಜಿಕ ಚಟುವಟಿಕೆಗಳಿಗೂ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ.
ಈ ಮ್ಯಾರಥಾನ್ ಒಟ್ಟು ಮೂರು ವಿಭಾಗಗಳಲ್ಲಿ ನಡೆಯಲಿದ್ದು, 3 ಕಿ.ಮೀ ಓಟಕ್ಕೆ ರೂ. 250, 5 ಕಿ.ಮೀ ಓಟಕ್ಕೆ ರೂ. 350 ಹಾಗೂ 10 ಕಿ.ಮೀ ಓಟಕ್ಕೆ ರೂ. 450 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. 5 ಕಿ.ಮೀ ಮತ್ತು 10 ಕಿ.ಮೀ ವಿಭಾಗದ ವಿಜೇತರಿಗೆ ಕ್ರಮವಾಗಿ ರೂ. 5000 ಹಾಗೂ ರೂ. 3000 ನಗದು ಬಹುಮಾನದೊಂದಿಗೆ ಟ್ರೋಫಿ ನೀಡಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಟಿ-ಶರ್ಟ್, ಬಿಬ್ ಸಂಖ್ಯೆ, ಫಿನಿಷರ್ ಪದಕ, ಉಪಹಾರ ಮತ್ತು ಪ್ರಮಾಣಪತ್ರ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ವಿಶೇಷ ಆಕರ್ಷಣೆಯಾಗಿ ಇನ್ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ರೀಲ್ಸ್‌ಗೆ ರೂ. 10,000 ನಗದು ಬಹುಮಾನ ಹಾಗೂ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವ ಸಂಸ್ಥೆಗೆ ವಿಶೇಷ ಟ್ರೋಫಿ ನೀಡಲಾಗುವುದು. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹೆಸರು ದಾಖಲಿಸಬಹುದು. ‘ಮಿತಿಗಳನ್ನು ಮೀರಿ ಓಡಿ’ (Run Beyond Limits) ಎಂಬ ಸಂದೇಶದೊಂದಿಗೆ ನಡೆಯುವ ಈ ಕ್ರೀಡಾಕೂಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.