ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2025-26ನೇ ಸಾಲಿನಲ್ಲಿ ಅತ್ಯಂತ ಆಶಾದಾಯಕ ಪ್ರಗತಿಯನ್ನು ದಾಖಲಿಸಿದೆ. ಈ ಆರ್ಥಿಕ ವರ್ಷದಲ್ಲಿ ಒಕ್ಕೂಟವು ಒಟ್ಟು 1,270 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಮೂಲಕ ಹಿಂದಿನ ವರ್ಷಕ್ಕಿಂತ (1,174 ಕೋಟಿ ರೂ.) ಶೇಕಡಾ 8.18ರಷ್ಟು ಅಭಿವೃದ್ಧಿ ಸಾಧಿಸಿದೆ. ಪ್ರಸ್ತುತ ಒಕ್ಕೂಟವು 51,693 ಸಕ್ರಿಯ ಸದಸ್ಯರನ್ನು ಹೊಂದಿದ್ದು, ಪ್ರತಿದಿನ ಸರಾಸರಿ 4.07 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಇದು ಕಳೆದ ಸಾಲಿಗೆ ಹೋಲಿಸಿದರೆ ಶೇಕಡಾ 19ರಷ್ಟು ಗಮನಾರ್ಹ ಏರಿಕೆಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಹೇಳಿದರು. ಈ ಬಗ್ಗೆ ಮಾಹಿತಿ ನೀಡಿದ ಅವರು,
ಆರ್ಥಿಕವಾಗಿ ಈ ಸಾಲಿನಲ್ಲಿ ಅಂದಾಜು 10.61 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಒಕ್ಕೂಟ ನಿರೀಕ್ಷಿಸಿದೆ. ರೈತರ ಹಿತದೃಷ್ಟಿಯಿಂದ ಹಾಲಿನ ದರದಲ್ಲಿ ವಿಶೇಷ ಪ್ರೋತ್ಸಾಹಧನವನ್ನು ಘೋಷಿಸಲಾಗಿದ್ದು, ಫೆಬ್ರವರಿ 21, 2026 ರಿಂದ ಮೇ 31, 2026ರವರೆಗೆ ಪ್ರತಿ ಲೀಟರ್‌ಗೆ ಹೆಚ್ಚುವರಿ 1 ರೂಪಾಯಿಯಂತೆ ಒಟ್ಟು 2.50 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಸಾಲಿನಲ್ಲಿ ಒಟ್ಟು 23.99 ಕೋಟಿ ರೂಪಾಯಿಗಳನ್ನು ರೈತರ ಪ್ರೋತ್ಸಾಹಧನಕ್ಕಾಗಿ ವ್ಯಯಿಸಲಾಗಿದೆ ಎಂದರು. ಇದರೊಂದಿಗೆ ಮಿನಿ ಡೈರಿ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಸೇರಿದಂತೆ ವಿವಿಧ ಪೂರಕ ಯೋಜನೆಗಳಿಗಾಗಿ 6.64 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ. ಮುಂದಿನ 2026-27ನೇ ಸಾಲಿನ ಅಭಿವೃದ್ಧಿ ಯೋಜನೆಗಳಿಗಾಗಿ ಈಗಾಗಲೇ 60 ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ.
ಮಾರಾಟದ ವಿಚಾರದಲ್ಲೂ ಒಕ್ಕೂಟವು ಮುಂಚೂಣಿಯಲ್ಲಿದ್ದು, 1,781 ಸಕ್ರಿಯ ಡೀಲರ್‌ಗಳು ಹಾಗೂ ವಿವಿಧ ಮಳಿಗೆಗಳ ಮೂಲಕ ದಿನವಹಿ ಸರಾಸರಿ 3,87,360 ಲೀಟರ್ ಹಾಲು ಮತ್ತು 81,979 ಕೆ.ಜಿ ಮೊಸರನ್ನು ಮಾರಾಟ ಮಾಡುತ್ತಿದೆ. ಇವುಗಳೊಂದಿಗೆ ಪನ್ನೀರ್, ತುಪ್ಪ, ಸುವಾಸಿತ ಹಾಲು ಹಾಗೂ ಮಜ್ಜಿಗೆಯ ಮಾರಾಟವೂ ಉತ್ತಮವಾಗಿದ್ದು, ಪ್ರತಿದಿನ ಸರಾಸರಿ 3.03 ಕೋಟಿ ರೂಪಾಯಿಗಳ ಮಾರಾಟ ವಹಿವಾಟು ನಡೆಯುತ್ತಿದೆ.
ಮೂಲಸೌಕರ್ಯ ಅಭಿವೃದ್ಧಿಗಾಗಿ ಒಕ್ಕೂಟವು 12.81 ಕೋಟಿ ರೂಪಾಯಿ ವೆಚ್ಚದಲ್ಲಿ ನವೀನ ತಂತ್ರಜ್ಞಾನದ ಯಂತ್ರೋಪಕರಣಗಳು, ಕೋಲ್ಡ್ ಸ್ಟೋರೇಜ್ ಮತ್ತು ರೆಫ್ರಿಜರೇಷನ್ ಘಟಕಗಳನ್ನು ಅಳವಡಿಸಿಕೊಂಡಿದೆ. ಮಂಗಳೂರಿನ ಕೇಂದ್ರ ಕಚೇರಿಯಲ್ಲಿ 7 ಕೋಟಿ ರೂ. ವೆಚ್ಚದ ಗೋದಾಮು ಹಾಗೂ ಉಡುಪಿ ಡೈರಿಯಲ್ಲಿ 4.25 ಕೋಟಿ ರೂ. ವೆಚ್ಚದ ಆಡಳಿತ ಕಚೇರಿ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿವೆ.
ಮುಂದಿನ ದಿನಗಳಲ್ಲಿ ಮೆಗಾ ಡೈರಿ, ಐಸ್ ಕ್ರೀಂ ಪ್ಲಾಂಟ್ ಮತ್ತು ಪನ್ನೀರ್ ಘಟಕಗಳ ಸ್ಥಾಪನೆಗೆ ಆಡಳಿತ ಮಂಡಳಿಯು ಬೃಹತ್ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸುಚರಿತ ಶೆಟ್ಟಿ, ಚಂದ್ರಶೇಖರ್, ಮಮತಾ ಶೆಟ್ಟಿ, ರವಿರಾಜ್ ಉಡುಪ ಮತ್ತು ಡಿ ವಿವೇಕ್ ಉಪಸ್ಥಿತರಿದ್ದರು.