ಇರ್ದೆ : ಇರ್ದೆ ಗ್ರಾಮದ ಇತಿಹಾಸ ಪ್ರಸಿದ್ಧ ಹಾಗೂ ಶ್ರದ್ಧಾ ಕೇಂದ್ರವಾದ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಇದೀಗ ಜೀರ್ಣೋದ್ಧಾರಗೊಳ್ಳುತ್ತಿದ್ದು, ಸುಮಾರು 23 ವರ್ಷಗಳ ಸುದೀರ್ಘ ಅಂತರದ ಬಳಿಕ ಈ ಪವಿತ್ರ ಕಾರ್ಯಕ್ಕೆ ಚಾಲನೆ ದೊರೆತಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಮಾರ್ಗದರ್ಶನದಂತೆ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಮೇ 25ರಂದು ದೇವರ ಬಿಂಬವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಮೂಲಕ ದುರಸ್ತಿ ಕಾರ್ಯಗಳು ಅಧಿಕೃತವಾಗಿ ಆರಂಭಗೊಳ್ಳಲಿವೆ. ಈ ಮಹತ್ಕಾರ್ಯದ ಭಾಗವಾಗಿ ಪ್ರಧಾನ ದೇವರ ಗರ್ಭಗುಡಿ ಮತ್ತು ನಮಸ್ಕಾರ ಮಂಟಪಗಳ ಜೀರ್ಣೋದ್ಧಾರ, ದೋಷಪೂರಿತವಾಗಿದ್ದ ಗಣಪತಿ ಹಾಗೂ ದುರ್ಗಾ ದೇವಿಯ ಬಿಂಬಗಳ ಬದಲಿಗೆ ಹೊಸ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದೆ. ಅಲ್ಲದೆ, ಗರ್ಭಗುಡಿ ಮತ್ತು ನಮಸ್ಕಾರ ಮಂಟಪಕ್ಕೆ ತಾಮ್ರದ ಹೊದಿಕೆ, ಸುತ್ತುಪೌಳಿಗೆ ಶೀಟಿನ ಛಾವಣಿ, ಸುತ್ತುಗೋಪುರಕ್ಕೆ ಗ್ರಾನೈಟ್ ಅಳವಡಿಕೆ ಹಾಗೂ ಪ್ರಧಾನ ಬಾಗಿಲಿನ ವಿಸ್ತರಣೆಯಂತಹ ಪ್ರಮುಖ ಬದಲಾವಣೆಗಳನ್ನು ಯೋಜಿಸಲಾಗಿದೆ. ಕದಿಕೆ ಚಾವಡಿ ದುರಸ್ತಿ ಮತ್ತು ದೈವಗಳ ಬಂಡಿ ಆಲಯದ ನೂತನ ನಿರ್ಮಾಣವೂ ಈ ಯೋಜನೆಯಲ್ಲಿ ಸೇರಿದ್ದು, ಒಟ್ಟು ವೆಚ್ಚವು ಸುಮಾರು ₹3.5 ಕೋಟಿ ಎಂದು ಅಂದಾಜಿಸಲಾಗಿದೆ.
ನಮ್ಮ ಪೂರ್ವಜರ ಶ್ರಮ ಮತ್ತು ಭಕ್ತಿಯ ಸಂಕೇತವಾದ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಅತ್ಯಂತ ಶೀಘ್ರವಾಗಿ ಪೂರ್ಣಗೊಳಿಸಿ, ಬರುವ 2027ರ ಜನವರಿ 10ರ ಭಾನುವಾರದಂದು ದೇವರ ಪ್ರತಿಷ್ಠಾಪನೆ ಹಾಗೂ ಅದ್ಧೂರಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲು ವ್ಯವಸ್ಥಾಪನಾ ಸಮಿತಿಯು ನಿರ್ಧರಿಸಿದೆ. ಈ ಪುಣ್ಯಕಾರ್ಯವು ಗ್ರಾಮದ ಪ್ರತಿಯೊಬ್ಬರ ಸಹಭಾಗಿತ್ವದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ, ಭಕ್ತಾದಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತನು-ಮನ-ಧನದಿಂದ ಸಹಾಯ ಹಸ್ತ ಚಾಚಿ, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ವಿಷ್ಣುಮೂರ್ತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯು ಪ್ರೀತಿಯಿಂದ ವಿನಂತಿಸಿಕೊಂಡಿದೆ.