ಉಜಿರೆ : ಉದ್ಯಮ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ನಿಷ್ಠೆ, ಕಠಿಣ ಪರಿಶ್ರಮ ಹಾಗೂ ಧೈರ್ಯ ಅತೀ ಅಗತ್ಯ ಎಂದು ಬೆಳ್ತಂಗಡಿಯ ವಿನಾಯಕ ರೈಸ್ ಮಿಲ್ ಮಾಲೀಕ ಹಾಗೂ ಉದ್ಯಮಿ ಶ್ರೀಕಾಂತ್ ಕಾಮತ್ ಅವರು ಅಭಿಪ್ರಾಯಪಟ್ಟರು.
ಉಜಿರೆಯ ಸಿದ್ಧವನದಲ್ಲಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಪ್ರಧಾನಮಂತ್ರಿ ಉದ್ಯೋಗ ಸೃಜನಶೀಲ ಕಾರ್ಯಕ್ರಮದ (ಪಿ.ಎಂ.ಇ.ಜಿ.ಪಿ) ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಈ ಸಂಸ್ಥೆಯಲ್ಲಿ ತರಬೇತಿ ಪಡೆದವರು ಆತ್ಮವಿಶ್ವಾಸದಿಂದ ಸ್ವಉದ್ಯೋಗ ಕೈಗೊಂಡು, ಇತರರಿಗೂ ಉದ್ಯೋಗದಾತರಾಗಬೇಕು. ಗುಣಮಟ್ಟದ ವ್ಯವಹಾರದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿ, ಪ್ರಮಾಣ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಮಾತನಾಡಿ, ಶಿಬಿರಾರ್ಥಿಗಳು ತರಬೇತಿಯ ಅವಧಿಯಲ್ಲಿ ಕಲಿತ ಕೌಶಲ್ಯಗಳನ್ನು ಉದ್ಯಮದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಪ್ರೇರೇಪಿಸಿದರು.
ಸಂಸ್ಥೆಯ ನಿರ್ದೇಶಕ ಅಜೇಯ ಅವರು ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರೆ, ಹಿರಿಯ ಉಪನ್ಯಾಸಕ ಕರುಣಾಕರ್ ಕೆ. ಜೈನ್ ವಂದನಾರ್ಪಣೆ ಮಾಡಿದರು. ಶ್ರೀಮತಿ ನದಿಯ ಮತ್ತು ಬಳಗದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಇದೇ ಸಂದರ್ಭದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಾದ ಮಹಮ್ಮದ್ ಕುಂಞ್ಜ, ಅಮಿತಾ ಲೋಬೋ ಹಾಗೂ ರಾಜೇಶ್ ರೈ ತಮ್ಮ ಅನುಭವಗಳನ್ನು ಹಂಚಿಕೊಂಡರು.