image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಲಿಕಾನ್ ಬೀಚ್ ಸ್ಟೋರೀಸ್ ಬಿಡುಗಡೆ: ಯಶಸ್ಸಿಗೆ ಕಠಿಣ ಪರಿಶ್ರಮವೇ ಆಧಾರ ಎಂದ ವಿವೇಕ್ ಆಳ್ವ

ಸಿಲಿಕಾನ್ ಬೀಚ್ ಸ್ಟೋರೀಸ್ ಬಿಡುಗಡೆ: ಯಶಸ್ಸಿಗೆ ಕಠಿಣ ಪರಿಶ್ರಮವೇ ಆಧಾರ ಎಂದ ವಿವೇಕ್ ಆಳ್ವ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಟೆಕ್ನಾಲಜಿ ಸೆಂಟರ್ ವತಿಯಿಂದ ಹಮ್ಮಿಕೊಳ್ಳಲಾದ ವಿಶೇಷ ಕಾರ್ಯಕ್ರಮದಲ್ಲಿ ನವೋದ್ಯಮಿಗಳ ಸ್ಫೂರ್ತಿದಾಯಕ ಕಥೆಗಳನ್ನು ಒಳಗೊಂಡ ‘ಸಿಲಿಕಾನ್ ಬೀಚ್ ಸ್ಟೋರೀಸ್’ ವೀಡಿಯೋ ಪಾಡ್‌ಕಾಸ್ಟ್ ಸರಣಿಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರು, ಕರಾವಳಿ ಕರ್ನಾಟಕದ ಸಮೃದ್ಧ ವ್ಯಾಪಾರ ಮತ್ತು ಶಿಕ್ಷಣ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಈ ವೇದಿಕೆ ಪ್ರಮುಖ ಪಾತ್ರ ವಹಿಸಲಿದೆ ಎಂದರು. ದೊಡ್ಡ ಸಾಧನೆಗಳನ್ನು ಮಾಡಲು ಕೇವಲ ಪದವಿ ಮುಖ್ಯವಲ್ಲ, ಬದಲಾಗಿ ಕಠಿಣ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನದ ಮನೋಭಾವ ಅಗತ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

​ಆಳ್ವಾಸ್ ಉದ್ಯಮಶೀಲತಾ ಅಭಿವೃದ್ಧಿ ಘಟಕದ ವಿದ್ಯಾರ್ಥಿಗಳೇ ಈ ಯೋಜನೆಯನ್ನು ಮುನ್ನಡೆಸುತ್ತಿರುವುದು ವಿಶೇಷವಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ನವೋದ್ಯಮಗಳ ಸಂಸ್ಥಾಪಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪರಿಪೂರ್ಣತೆಗಾಗಿ ಕಾಯದೆ ಕೆಲಸ ಆರಂಭಿಸುವುದೇ ಯಶಸ್ಸಿನ ಮೊದಲ ಮೆಟ್ಟಿಲು ಎಂದು ಘಟಕದ ಮುಖ್ಯಸ್ಥ ವೇಣುರಾವ್ ದೇವ್ ತಿಳಿಸಿದರೆ, ಆಪಾವಾಣಿ ಎನ್ವಿರಾನ್‌ಮೆಂಟಲ್ ಸೊಲ್ಯೂಷನ್ಸ್‌ನ ಡಾ. ವಿಷ್ಣುಶರ್ಮ ಆಟಿಕುಕ್ಕೆ ಅವರು ಸವಾಲುಗಳ ನಡುವೆಯೂ ಡಿಜಿಟಲ್ ಮಾಧ್ಯಮಗಳನ್ನು ಜಾಣ್ಮೆಯಿಂದ ಬಳಸಿ ಬೆಳೆಯುವ ಬಗ್ಗೆ ವಿವರಿಸಿದರು.

ಸ್ಟ್ರೇಕಾನ್ ಎಲ್‌ಎಲ್‌ಪಿಯ ಆಕಾಶ್ ಶೆಟ್ಟಿ ಮಾತನಾಡಿ, ಅನಿಶ್ಚಿತತೆಗಳ ನಡುವೆಯೂ ಕಲಿಕೆಯ ಮನೋಭಾವ ಯಶಸ್ಸು ತಂದುಕೊಡುತ್ತದೆ ಎಂದರು. ವೇದಿಕೆಯಲ್ಲಿ ರಾಮಪ್ರಸಾದ್ ಘಾಟೆ, ಚಿನ್ಮಯ ದೇಲಂಪಾಡಿ ಹಾಗೂ ಪ್ರಾಧ್ಯಾಪಕ ರಾಮಾನಂದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ನೇಹ ಚಿತ್ರಕರ್ ಕಾರ್ಯಕ್ರಮ ನಿರೂಪಿಸಿದರೆ, ರೋಲ್ಮ ಸ್ವಾಗತಿಸಿ, ನಂದನ ವಂದಿಸಿದರು.

Category
ಕರಾವಳಿ ತರಂಗಿಣಿ