ಮಂಗಳೂರು: ಅಡ್ಯಾರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವತಿಯಿಂದ ಇತ್ತೀಚೆಗೆ ವಿಶ್ವ ಭೂದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಭಾಗವಾಗಿ 'ಹಸಿರು ಎಂಜಿನಿಯರಿಂಗ್' ಪರಿಕಲ್ಪನೆಯಡಿ ಬೀಜದ ಉಂಡೆಗಳನ್ನು ತಯಾರಿಸುವ ಮೂಲಕ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಂಡಾರಿ ಫೌಂಡೇಶನ್ ಟ್ರಸ್ಟಿ ಶ್ರೀ ದೇವದಾಸ ಹೆಗ್ಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರಕೃತಿ ಸಮತೋಲನದಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ರಿತೇಶ್ ಪಕ್ಕಳ ಪಿ. ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸುತ್ತಾ, ವಿವಿಧ ಜಾತಿಯ ಬೀಜಗಳನ್ನು ಬಳಸಿ ಬೀಜದ ಉಂಡೆಗಳನ್ನು ತಯಾರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸಾವಿರಾರು ಬೀಜದ ಉಂಡೆಗಳನ್ನು ಸಿದ್ಧಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಡಾ. ಸುಚೇತಾ ಜೆ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ಅಭಿಯಾನವು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮವನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.