ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿಯಾಗಿಸಿ ನಡುನೀರಿನಲ್ಲಿ ಕೈಬಿಟ್ಟ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಸಿ ಮುಟ್ಟಿಸಿದೆ. 21 ವರ್ಷದ ವಿದ್ಯಾರ್ಥಿನಿಯ ಭವಿಷ್ಯವನ್ನು ಹಾಳು ಮಾಡಿದ್ದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸಂತ್ರಸ್ತೆ ಮತ್ತು ಆಕೆಯ ಮಗುವಿನ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು 75 ಸಾವಿರ ರೂ. ಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯು ಸ್ವತಃ ಅಥವಾ ತನ್ನ ಪೋಷಕರ ಮೂಲಕ ಈ ಮೊತ್ತವನ್ನು ಮುಂದಿನ ಒಂದು ವಾರದೊಳಗೆ ಪಾವತಿಸಲು ಪ್ರಾರಂಭಿಸಬೇಕು ಮತ್ತು ಪ್ರತಿ ತಿಂಗಳು ಇದನ್ನು ಮುಂದುವರಿಸಬೇಕು ಎಂಬ ಷರತ್ತಿನ ಮೇಲೆ ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿದೆ. ವಿಚಾರಣೆ ವೇಳೆ ಸಂತ್ರಸ್ತೆಯ ಪರ ವಕೀಲರು ವಾದ ಮಂಡಿಸಿ, ಆರೋಪಿಯು ಮದುವೆಯ ಭರವಸೆ ನೀಡಿ ಅತ್ಯಾಚಾರವೆಸಗಿದ್ದು, ಈಗ ಮಗುವಿಗೆ ಒಂದು ವರ್ಷವಾಗುತ್ತ ಬಂದರೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು. ಸಂತ್ರಸ್ತೆಯ ಕುಟುಂಬವು ಅತ್ಯಂತ ಬಡತನದಲ್ಲಿದ್ದು, ಮಗುವಿನ ಪೋಷಣೆ ಕಷ್ಟಕರವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಇದೇ ವೇಳೆ ಸಂತ್ರಸ್ತೆ ಹಾಗೂ ಅವರ ಕುಟುಂಬದವರು ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಹೋಗಬಾರದೆಂದು ನಿರ್ಬಂಧ ವಿಧಿಸಿರುವ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿದೆ.