ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ಟೆಕ್ನಾಲಜಿ ಸೆಂಟರ್‌ನಲ್ಲಿ ಮೆಟಾಸಾಫ್ಟ್ ಐಟಿ ಸೊಲ್ಯೂಷನ್ಸ್ ಹಾಗೂ ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಹೊಸ ಕಚೇರಿ ಮತ್ತು ಸಂಶೋಧನೆ–ನವೀನತೆ ಕೇಂದ್ರವನ್ನು ಗುರುವಾರ ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಆಳ್ವಾಸ್ ಕಾಲೇಜು ತಂತ್ರಜ್ಞಾನ, ಸಂಶೋಧನೆ ಮತ್ತು ಉದ್ಯೋಗಾವಕಾಶಗಳ ಸಮಗ್ರ ಪರಿಸರವನ್ನು ಹೊಂದಿರುವ ವಿಶಿಷ್ಟ ಕ್ಯಾಂಪಸ್ ಆಗಿ ಬೆಳೆಯುತ್ತಿದ್ದು, ಇಲ್ಲಿ ಸ್ಥಾಪನೆಯಾಗಿರುವ ಐಟಿ ಕಂಪನಿಗಳು ಹಾಗೂ ಸ್ಟಾರ್ಟ್ಅಪ್‌ಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದರು. ಈ ಕೇಂದ್ರವು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್, ಲೈವ್ ಪ್ರಾಜೆಕ್ಟ್ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಪ್ರಮುಖ ವೇದಿಕೆಯಾಗಲಿದೆ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರು ಮಾತನಾಡಿ, ಕಾಲೇಜಿನ ಟೆಕ್ ಸೆಂಟರ್‌ಗಳಿಗಾಗಿ ಪ್ರತ್ಯೇಕ ಬ್ಲಾಕ್ ಮೀಸಲಿಟ್ಟಿದ್ದು, ಅಲ್ಲಿ ಕಂಪನಿಗಳಿಗೆ ಅಗತ್ಯವಿರುವ ಕಚೇರಿ ಸ್ಥಳ, ವಿದ್ಯುತ್ ಹಾಗೂ ಇಂಟರ್‌ನೆಟ್ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಕ್ಯಾಂಪಸ್‌ನಲ್ಲಿ ಇನ್ಫೋಸಿಸ್, ಸ್ಟೇಲಿಯಂ, ಸ್ಟ್ರೀಕಾನ್ ಸೇರಿದಂತೆ ಹಲವು ಕಂಪನಿಗಳು ಹಾಗೂ ಹತ್ತಾರು ಸ್ಟಾರ್ಟ್ಅಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕಾಕುಂಜೆ ಮತ್ತು ಮೆಟಾಸಾಫ್ಟ್ ಸಂಸ್ಥೆಗಳು ಸೇರ್ಪಡೆಗೊಂಡಿವೆ. ಈ ಸಂದರ್ಭದಲ್ಲಿ ಮೆಟಾಸಾಫ್ಟ್ ಸಂಸ್ಥೆಯ ಸರಿತಾ ಪ್ರವೀಣ್, ಕಾಕುಂಜೆ ಸಾಫ್ಟ್ವೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಕೆ. ಭಟ್ ಕಾಕುಂಜೆ, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.