image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾದಕ ವ್ಯಸನಿಗಳಿಗೆ ಕಡ್ಡಾಯವಾಗಿ ಹೆಚ್.ಐ.ವಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚನೆ

ಮಾದಕ ವ್ಯಸನಿಗಳಿಗೆ ಕಡ್ಡಾಯವಾಗಿ ಹೆಚ್.ಐ.ವಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಡ್ರಗ್ಸ್ ವ್ಯಸನಿಗಳಿಗೆ ಕಡ್ಡಾಯವಾಗಿ ಹೆಚ್.ಐ.ವಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ 'ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ'ದ ಜಿಲ್ಲಾಮಟ್ಟದ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಡ್ರಗ್ಸ್ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ಖಾಸಗಿ ಕ್ಲಿನಿಕ್‌ಗಳು, ನರ್ಸಿಂಗ್ ಹೋಂಗಳು ಮತ್ತು ಆಸ್ಪತ್ರೆಗಳು ತಮ್ಮಲ್ಲಿ ವರದಿಯಾಗುವ ಹೆಚ್.ಐ.ವಿ ಪ್ರಕರಣಗಳ ಬಗ್ಗೆ ಕಡ್ಡಾಯವಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದ ಜಿಲ್ಲಾಧಿಕಾರಿಗಳು, ಜನಸಂದಣಿ ಪ್ರದೇಶಗಳು, ಕೈಗಾರಿಕೆಗಳು ಹಾಗೂ ವಲಸೆ ಕಾರ್ಮಿಕರಲ್ಲಿ ಹೆಚ್.ಐ.ವಿ ತಪಾಸಣೆ ನಡೆಸಲು ಆಯಾ ಇಲಾಖೆಗಳು ಸಹಕರಿಸಬೇಕು ಎಂದರು.

​ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಖತೀಜಾ ದಿಲ್‍ಶಾದ್ ಅವರು, ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದಡಿ ಶೇ. 95ರಷ್ಟು ಬಾಧಿತರಿಗೆ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅರಿವು ಮೂಡಿಸಿ, ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ವೈರಸ್ ನಿಯಂತ್ರಿಸುವುದು ಮುಖ್ಯ ಗುರಿಯಾಗಿದೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ ಸದ್ಯ 4,663 ಹೆಚ್.ಐ.ವಿ ಸಕ್ರಿಯ ಪ್ರಕರಣಗಳಿದ್ದು, ಕಳೆದ ವರ್ಷ ನಡೆಸಲಾದ 84,893 ಪರೀಕ್ಷೆಗಳಲ್ಲಿ 293 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಮಾರ್ಚ್ ಅಂತ್ಯದವರೆಗೆ ಶೇ. 85.23 ರಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಜಿಲ್ಲೆಯಲ್ಲಿ ಈವರೆಗೆ 2,972 ಸಾವುಗಳು ಸಂಭವಿಸಿವೆ ಎಂದು ಅವರು ಅಂಕಿಅಂಶಗಳನ್ನು ಹಂಚಿಕೊಂಡರು. ಪ್ರಸ್ತುತ ಜಿಲ್ಲೆಯಲ್ಲಿ 21 ಕೌನ್ಸಿಲಿಂಗ್ ಕೇಂದ್ರಗಳು ಮತ್ತು 9 ಎ.ಆರ್.ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ್, ಅಪರ ಜಿಲ್ಲಾಧಿಕಾರಿ ರಾಜು ಕೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ