ಪುತ್ತೂರು: ದೇಶದ ಆಡಳಿತ ವ್ಯವಸ್ಥೆಗೆ ದಿಕ್ಸೂಚಿಯಾಗಿರುವ ಜನಗಣತಿ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ತಮಗೆ ಅಗತ್ಯವಾದ ರಕ್ಷಣೆ, ಸಾರಿಗೆ ವ್ಯವಸ್ಥೆ ಮತ್ತು ಸುರಕ್ಷತಾ ಕಿಟ್‌ಗಳನ್ನು ಒದಗಿಸುವಂತೆ ಒತ್ತಾಯಿಸಿ ಗಣತಿದಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮೀಣ ಪ್ರದೇಶಗಳು ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಿಂದ ಕೂಡಿದ್ದು, ಇಲ್ಲಿಗೆ ಯಾವುದೇ ಸಮರ್ಪಕ ಸಾರಿಗೆ ಸೌಲಭ್ಯವಿಲ್ಲ. ಗಣತಿ ಕಾರ್ಯಕ್ಕಾಗಿ ಸಿಬ್ಬಂದಿಗಳು ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ. ಖಾಸಗಿ ವಾಹನಗಳ ಮೊರೆ ಹೋದರೆ ಅದಕ್ಕೆ ತಗಲುವ ವೆಚ್ಚವನ್ನು ಸಿಬ್ಬಂದಿಗಳೇ ಭರಿಸಬೇಕಾಗಿದ್ದು, ಸರ್ಕಾರದಿಂದ ಯಾವುದೇ ಪ್ರಯಾಣ ಭತ್ಯೆ ದೊರೆಯುತ್ತಿಲ್ಲ ಎಂಬುದು ಸಿಬ್ಬಂದಿಗಳ ಪ್ರಮುಖ ದೂರು.
ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಗಣತಿದಾರರಿಗೆ ಕನಿಷ್ಠ ಸುರಕ್ಷತಾ ಸಾಧನಗಳನ್ನೂ ನೀಡಿಲ್ಲದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಅಧಿಕೃತ ಗುರುತಿನ ಚೀಟಿ ಮತ್ತು ಬ್ಯಾಡ್ಜ್‌ಗಳು.
ಕುಡಿಯುವ ನೀರಿನ ಬಾಟಲಿ, ಟೋಪಿ ಮತ್ತು ಛತ್ರಿ. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಸನ್‌ಸ್ಕ್ರೀನ್ ಲೋಶನ್. ಡಿಜಿಟಲ್ ಸಾಧನಗಳಿಗಾಗಿ ಪವರ್ ಬ್ಯಾಂಕ್ ಮತ್ತು ದಾಖಲೆ ಸಂರಕ್ಷಣಾ ಕವರ್‌ಗಳು.
ಸೊಳ್ಳೆ ನಿವಾರಕ ಲೋಶನ್ ಹಾಗೂ ಮಾಸ್ಕ್ ಸೇರಿದಂತೆ ಆರೋಗ್ಯ ಸುರಕ್ಷಾ ಸಾಮಗ್ರಿಗಳು.
ಮಹಿಳಾ ಸಿಬ್ಬಂದಿಗಳ ಸುರಕ್ಷತೆ ಮತ್ತು ಆರೋಗ್ಯ ಕಾಳಜಿ ಗ್ರಾಮೀಣ ಭಾಗಗಳಲ್ಲಿ ಶೌಚಾಲಯದ ಕೊರತೆಯಿಂದಾಗಿ ಮಹಿಳಾ ಸಿಬ್ಬಂದಿಗಳು ತೀವ್ರ ಮುಜುಗರ ಮತ್ತು ಸಮಸ್ಯೆ ಎದುರಿಸುತ್ತಿದ್ದಾರೆ.
ಸಂಜೆ ಹೊತ್ತಿನವರೆಗೆ ಅರಣ್ಯ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವುದು ಅವರ ಭದ್ರತೆಯ ದೃಷ್ಟಿಯಿಂದ ಆತಂಕಕಾರಿಯಾಗಿದೆ. ಇದರೊಂದಿಗೆ ಏಪ್ರಿಲ್-ಮೇ ತಿಂಗಳ ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಕೆಲಸದ ಅವಧಿಯನ್ನು ಸಡಿಲಗೊಳಿಸಿ, ವಿಶ್ರಾಂತಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿದೆ.
ಬಿಸಿಲಿನ ತೀವ್ರತೆ ಹೆಚ್ಚಿರುವ ಅವಧಿಯಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಬೇಕು. ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಭದ್ರತಾ ಮಾರ್ಗಸೂಚಿ ಮತ್ತು ಗುಂಪು ಆಧಾರಿತ ಕಾರ್ಯಪದ್ಧತಿ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.
"ಗಣತಿದಾರರು ಕೇವಲ ಅಂಕಿ-ಅಂಶಗಳನ್ನು ಸಂಗ್ರಹಿಸುವವರಲ್ಲ, ಅವರು ಸರ್ಕಾರದ ಕಣ್ಣು ಮತ್ತು ಕಿವಿಗಳಿದ್ದಂತೆ. ಅವರ ಸುರಕ್ಷತೆ ಮತ್ತು ಗೌರವವನ್ನು ಕಡೆಗಣಿಸಿದರೆ ಕಾರ್ಯದ ಗುಣಮಟ್ಟಕ್ಕೆ ಧಕ್ಕೆಯಾಗಲಿದೆ" ಎಂದು ಸಿಬ್ಬಂದಿಗಳು ಮನವಿಯಲ್ಲಿ ಎಚ್ಚರಿಸಿದ್ದಾರೆ.