ಮೂಡುಬಿದಿರೆ: ಕರಾವಳಿ ಮತ್ತು ಮಲೆನಾಡಿನ ಸಮಸ್ತ ಜೈನ ಬಾಂಧವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮ ಹಾಗೂ ಧಾರ್ಮಿಕ ವೈಭವದೊಂದಿಗೆ ಹಮ್ಮಿಕೊಂಡಿತ್ತು. 3000ಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸಿದ್ದ ಈ ಸಮಾರಂಭವು ಆಧ್ಯಾತ್ಮಿಕ ಮೌಲ್ಯಗಳ ಸಂಗಮಕ್ಕೆ ಸಾಕ್ಷಿಯಾಯಿತು.
ಆಳ್ವಾಸ್ ವಿದ್ಯಾರ್ಥಿಗಳಿಂದ ಜಿನಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬಳಿಕ ಕೊಂಬು ವಾದ್ಯ, ನಾದಸ್ವರ ಹಾಗೂ ಪೂರ್ಣಕುಂಭದ ಮೆರವಣಿಗೆಯ ಮೂಲಕ ಮಹಾವೀರ ಸ್ವಾಮಿಯ ಜಿನಬಿಂಬವನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ ಹಾಗೂ ಮಹಾಮಂಗಳಾರತಿ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರಿಂದ ನಡೆದ ಜಿನಭಕ್ತಿ ಗಾಯನವು ಪ್ರೇಕ್ಷಕರ ಮನಸೂರೆಗೊಂಡಿತು. ಸಮಾರಂಭದ ಆವರಣದಲ್ಲಿ 24 ತೀರ್ಥಂಕರರ ವಿಗ್ರಹಗಳನ್ನು ಪ್ರತಿಷ್ಠಾಪಿಸಿರುವುದು ಮತ್ತು ಬೃಹತ್ ವಿದ್ಯುತ್ ದೀಪಗಳ ಅಲಂಕಾರವು ಕ್ಷೇತ್ರಕ್ಕೆ ಜೈನಕಾಶಿಯ ಕಳೆಯನ್ನು ನೀಡಿತ್ತು.
ಜಲಾಭಿಷೇಕದಿಂದ ಆರಂಭಗೊಂಡು ಏಳನೀರು, ಇಕ್ಷುರಸ, ಕ್ಷೀರ, ಕಾಶ್ಮೀರಿ ಕೇಸರಿ ಸೇರಿದಂತೆ ವಿವಿಧ ಪವಿತ್ರ ದ್ರವ್ಯಗಳಿಂದ ಮಹಾವೀರ ಸ್ವಾಮಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಕನಕ ಪುಷ್ಪವೃಷ್ಠಿ ಮತ್ತು ಶಾಂತಿ ಮಂತ್ರಗಳ ಪಠಣದೊಂದಿಗೆ ಪೂರ್ಣಕುಂಭ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಮೂಡುಬಿದಿರೆಯ ಚೌಟರ ಅರಮನೆಯ ಅನಿತಾ ಸುರೇಂದ್ರ ಕುಮಾರ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿತಾ ಸುರೇಂದ್ರ ಕುಮಾರ್ ಅವರು, ಡಾ. ಎಂ. ಮೋಹನ್ ಆಳ್ವ ಅವರು ಕಳೆದ 14 ವರ್ಷಗಳಿಂದ ಈ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಅವರು ಮೂಡುಬಿದಿರೆಯನ್ನು ವಿದ್ಯಾಕಾಶಿಯಾಗಿ ರೂಪಿಸುವುದರ ಜೊತೆಗೆ ಸಮಾಜದ ವಿವಿಧ ವರ್ಗಗಳನ್ನು ಸಮನ್ವಯದಿಂದ ಒಂದಾಗಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ಅಹಿಂಸೆ ಮತ್ತು ಸತ್ಯದ ಹಾದಿ ಎಂದಿಗೂ ಶ್ರೇಷ್ಠವಾದುದು ಎಂದು ಅವರು ಅಭಿಪ್ರಾಯಪಟ್ಟರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಜೈನ ಧರ್ಮದ ಮೂಲ ತತ್ವಗಳು ವ್ಯಕ್ತಿಯಲ್ಲಿ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯವನ್ನು ತುಂಬುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ವಿವಿಧ ಅರಸು ಮನೆತನದ ಯಜಮಾನರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಮುನಿರಾಜ ರೆಂಜಾಳ ಮತ್ತು ನವೀನಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.