image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾರೀಶಕ್ತಿ ವಂದನ್ ಅಧಿನಿಯಮಕ್ಕೆ 230 ಸದಸ್ಯರು ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ- ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ನಾರೀಶಕ್ತಿ ವಂದನ್ ಅಧಿನಿಯಮಕ್ಕೆ 230 ಸದಸ್ಯರು ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ- ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ಈ ಐತಿಹಾಸಿಕ ಕಾಯ್ದೆಯು 2029ರ ಒಳಗಾಗಿ ಜಾರಿಯಾಗಲಿದ್ದು, ಇದು ಈಗಾಗಲೇ ಸಂವಿಧಾನದ 106ನೇ ತಿದ್ದುಪಡಿಯಾಗಿ ನೋಟಿಫೈ ಆಗಿದೆ. ಇತ್ತೀಚೆಗೆ ಈ ಸಂಬಂಧ ನಡೆದ ಮತದಾನದಲ್ಲಿ 298 ಸದಸ್ಯರು ಕಾಯ್ದೆಯ ಪರವಾಗಿ ಮತ ಚಲಾಯಿಸಿದರೆ, 230 ಸದಸ್ಯರು ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ ಎಂದು ದಕ್ಷಿಣ ಕನ್ನಡದ ಸಂಸದರಾದ ಬ್ರಿಜೇಶ್ ಚೌಟ ವಿಷಾದಿಸಿದ್ದಾರೆ. ಅವರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.

​ವಿಶೇಷವಾಗಿ ದಕ್ಷಿಣದ ರಾಜ್ಯಗಳಿಗೆ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ನಂತರ ಅನ್ಯಾಯವಾಗುತ್ತದೆ ಎಂಬ ವಿರೋಧ ಪಕ್ಷಗಳ ವಾದವನ್ನು ಅಂಕಿಅಂಶಗಳ ಸಮೇತ ಚೌಟ ಅವರು ತಳ್ಳಿಹಾಕಿದ್ದಾರೆ. ಡಿಲಿಮಿಟೇಶನ್ ನಂತರ ಕರ್ನಾಟಕದ ಸ್ಥಾನಗಳು 28ರಿಂದ 42ಕ್ಕೆ, ಆಂಧ್ರಪ್ರದೇಶ 25ರಿಂದ 38ಕ್ಕೆ, ತೆಲಂಗಾಣ 17ರಿಂದ 26ಕ್ಕೆ, ತಮಿಳುನಾಡು 39ರಿಂದ 59ಕ್ಕೆ ಹಾಗೂ ಕೇರಳದ ಸ್ಥಾನಗಳು 20ರಿಂದ 30ಕ್ಕೆ ಏರಿಕೆಯಾಗಲಿವೆ. ಇದರಿಂದ ದಕ್ಷಿಣದ ರಾಜ್ಯಗಳ ಒಟ್ಟು ಪ್ರಾತಿನಿಧ್ಯವು ಶೇ. 23.76 ರಿಂದ ಶೇ. 23.90ಕ್ಕೆ ಏರಿಕೆಯಾಗಲಿದೆಯೇ ಹೊರತು ಯಾವುದೇ ಕಡಿತವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಕ್ಷಿಣದ ರಾಜ್ಯಗಳ ಹಿತಾಸಕ್ತಿ ಕಾಯಲು ಕೇಂದ್ರ ಸರ್ಕಾರವು ಶೇ. 50ರಷ್ಟು ಅನುಪಾತದ ಏರಿಕೆಯನ್ನು (Proportionate Increase) ಬಿಲ್‌ನಲ್ಲಿ ಅಳವಡಿಸಲು ಒಪ್ಪಿಕೊಂಡಿದೆ. 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಡಿಲಿಮಿಟೇಶನ್ ಪ್ರಕ್ರಿಯೆ ನಡೆಯಲಿದ್ದು, ಮಹಿಳಾ ಮೀಸಲಾತಿಯು ಈ ಪ್ರಕ್ರಿಯೆಯ ನಂತರ ಜಾರಿಯಾಗುವುದು ಬಿಲ್‌ನ ಭಾಗವೇ ಆಗಿದೆ ಎಂದು ಅವರು ನೆನಪಿಸಿದ್ದಾರೆ. ವಿರೋಧ ಪಕ್ಷಗಳು ಈ ಹಿಂದೆ ಮಸೂದೆಯನ್ನು ಬೆಂಬಲಿಸಿ ಈಗ ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಚೌಟ ಅವರು ಟೀಕಿಸಿದ್ದಾರೆ.

Category
ಕರಾವಳಿ ತರಂಗಿಣಿ