ಪುತ್ತೂರು: ತಾಲೂಕಿನ ಪ್ರತಿಷ್ಠಿತ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಅಧಿಕೃತ ಚಾಲನೆ ದೊರೆತಿದ್ದು, ಈ ಸಂಬಂಧ ನೂತನ ಜೀರ್ಣೋದ್ಧಾರ ಸಮಿತಿಯನ್ನು ಘೋಷಿಸಲಾಗಿದೆ. ಭಾನುವಾರ ದೇವಸ್ಥಾನದ ಆವರಣದಲ್ಲಿ ನಡೆದ ಭಕ್ತಾದಿಗಳ ಹಾಗೂ ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಒಟ್ಟು 3.50 ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ರೂಪಿಸಲಾಗಿದೆ. ಇದರಲ್ಲಿ ಗರ್ಭಗುಡಿ, ಸುತ್ತುಪೌಳಿ, ನಮಸ್ಕಾರ ಮಂಟಪ ಹಾಗೂ ದೇವಸ್ಥಾನದ ಮುಖಮಂಟಪದ ನವೀಕರಣ ಕಾರ್ಯಗಳು ಸೇರಿವೆ. ಮುಂದಿನ ವರ್ಷದ ಮೇ ತಿಂಗಳೊಳಗೆ ಈ ಎಲ್ಲಾ ಕಾಮಗಾರಿಗಳನ್ನು ಪೂರೈಸಿ, ಭವ್ಯವಾಗಿ ಬ್ರಹ್ಮಕಲಶೋತ್ಸವ ನಡೆಸಲು ಸಮಿತಿ ನಿರ್ಧರಿಸಿದೆ.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲೋಟ್ಟು ಹಾಗೂ ಕಾರ್ಯದರ್ಶಿಯಾಗಿ ರಾಧಾಕೃಷ್ಣ ರೈ ಬಾಲೋಟ್ಟು ಆಯ್ಕೆಯಾಗಿದ್ದಾರೆ.
ದಾನಿಗಳಿಂದ 1.52 ಕೋಟಿ ರೂ. ವಾಗ್ದಾನ
ಸಭೆಯಲ್ಲೇ ಜೀರ್ಣೋದ್ಧಾರ ಕಾರ್ಯಗಳಿಗೆ ಭಕ್ತರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಸಮಿತಿಯ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ ವಿವಿಧ ದಾನಿಗಳಿಂದ ಒಟ್ಟು 1.52 ಕೋಟಿ ರೂಪಾಯಿಗಳ ಧನಸಹಾಯದ ವಾಗ್ದಾನ ಲಭಿಸಿದೆ. ಈ ಪೈಕಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಅವರು ವೈಯಕ್ತಿಕವಾಗಿ 25 ಲಕ್ಷ ರೂ. ಹಾಗೂ ಸರ್ಕಾರದಿಂದ 25 ಲಕ್ಷ ರೂ. ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಶೋಕ್ ಕುಮಾರ್ ರೈ ಅವರು, "ದೇವಸ್ಥಾನದ ಅಭಿವೃದ್ಧಿ ಎನ್ನುವುದು ಕೇವಲ ಸಮಿತಿಯ ಕೆಲಸವಲ್ಲ, ಇದು ಇಡೀ ಗ್ರಾಮದ ಜವಾಬ್ದಾರಿ. ಪ್ರತಿಯೊಬ್ಬ ಭಕ್ತರೂ ತನು-ಮನ-ಧನದಿಂದ ಸಹಕರಿಸಿದಾಗ ಮಾತ್ರ ನಿಗದಿತ ಅವಧಿಯಲ್ಲಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ಸಾಧ್ಯ," ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಸಾಮೂಹಿಕ ಹಾಲು ಪಾಯಸ ಸೇವೆ ಹಾಗೂ ರಂಗಪೂಜೆ ವಿಜೃಂಭಣೆಯಿಂದ ನೆರವೇರಿತು. ಸಭೆಯಲ್ಲಿ ಊರಿನ ಪ್ರಮುಖರು, ಸಮಿತಿಯ ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.