ಮಂಗಳೂರು: ರಾಜ್ಯದ ಸಮಗ್ರ ನಗರಾಭಿವೃದ್ಧಿಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಒಟ್ಟು ₹2,600 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ಶನಿವಾರ ನಗರದ ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಮಂಗಳೂರು ಮಹಾನಗರ ಪಾಲಿಕೆಯ ₹200 ಕೋಟಿ ವೆಚ್ಚದ 25 ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ನಗರ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ ಒಟ್ಟು ₹24,000 ಕೋಟಿ ರೂಪಾಯಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ ಸಚಿವರು, ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದರೂ, ಕೇಂದ್ರದಿಂದ ರಾಜ್ಯಕ್ಕೆ ಕೇವಲ ಶೇ. 10 ರಿಂದ 12 ರಷ್ಟು ಮಾತ್ರ ಅನುದಾನ ಮರಳಿ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜಕೀಯ ಮತ್ತು ಜಾತಿ ಮತಗಳಿಗೆ ಅತೀತವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ 13 ಮಹಾನಗರ ಪಾಲಿಕೆಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿದೆ. ಮಂಗಳೂರು ನಗರದ ಒಳಚರಂಡಿ ವ್ಯವಸ್ಥೆಗಾಗಿ ಈಗಾಗಲೇ ₹40 ಕೋಟಿ ಹಾಗೂ ರಾಜ್ಯದ ಕೆರೆಗಳ ಅಭಿವೃದ್ಧಿಗೆ ₹450 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಂಗಳೂರು ನಗರಕ್ಕೆ ₹165 ಕೋಟಿ ವಿಶೇಷ ಅನುದಾನ ನೀಡಿದ್ದಕ್ಕಾಗಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ನಗರದ ಅಭಿವೃದ್ಧಿಗಾಗಿ ಕಿಯೋನಿಕ್ಸ್ ಮೂಲಕ ₹100 ಕೋಟಿ ವೆಚ್ಚದಲ್ಲಿ ಐಟಿ ಪಾರ್ಕ್ ನಿರ್ಮಾಣ, ಕರಾವಳಿ ರಸ್ತೆಗಳ ಅಭಿವೃದ್ಧಿ ಹಾಗೂ ನದಿ ತೀರದ ಅತಿಕ್ರಮಣ ತಡೆಗೆ ಸರ್ಕಾರ ಯೋಜನೆ ರೂಪಿಸಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ₹70 ಕೋಟಿ ವೆಚ್ಚದ ಹೊಸ ಒಪಿಡಿ ಬ್ಲಾಕ್ ನಿರ್ಮಾಣವಾಗಲಿದೆ. ಅಭಿವೃದ್ಧಿ ಕೆಲಸಗಳಲ್ಲಿ ಕೇಂದ್ರ-ರಾಜ್ಯ ಎಂಬ ಭೇದ ಬೇಡ, ಇದು ಜನರ ಹಣ ಎಂದು ಅವರು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಮಂಗಳೂರಿನ ಒಳಚರಂಡಿ ವ್ಯವಸ್ಥೆಯ ಸುಧಾರಣೆಗೆ ₹1000 ಕೋಟಿ ವಿಶೇಷ ಅನುದಾನ ನೀಡಬೇಕು ಹಾಗೂ ಈ ಹಿಂದೆ ತಡೆಹಿಡಿಯಲಾದ ಕಾಮಗಾರಿಗಳನ್ನು ಪುನಃ ಆರಂಭಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮಾಜಿ ಸಚಿವ ಜೆ.ಆರ್. ಲೋಬೋ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಮನಪಾ ಆಯುಕ್ತ ರವಿಚಂದ್ರ ನಾಯಕ್ ಹಾಗೂ ಪ್ರಮುಖ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.