ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಯಾದ ರಾಷ್ಟ್ರೀಯ ಹೆದ್ದಾರಿ 73ರ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಬೃಹತ್ ಕೊಡುಗೆ ನೀಡಿದೆ. ಬಿ.ಸಿ. ರೋಡ್‌ನಿಂದ ಪೂಂಜಾಲಕಟ್ಟೆವರೆಗಿನ ಹೆದ್ದಾರಿ ನಿರ್ವಹಣೆ ಹಾಗೂ ಬಿ.ಸಿ. ರೋಡ್ ಜಂಕ್ಷನ್ ವ್ಯಾಪ್ತಿಯ ರಸ್ತೆ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗಾಗಿ ಒಟ್ಟು 64 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಿಲ್ಲೆಯ ಮೂಲಸೌಕರ್ಯಕ್ಕೆ ಆದ್ಯತೆ ನೀಡುತ್ತಿದ್ದು, ಈ ಹೊಸ ಅನುದಾನವು ಜಿಲ್ಲೆಯ ಆರ್ಥಿಕ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಲಿದೆ. ಅನುದಾನದ ವಿವರಗಳನ್ನು ಹಂಚಿಕೊಂಡಿರುವ ಸಂಸದರು, ಬಿ.ಸಿ. ರೋಡ್‌ನಿಂದ ಪುಂಜಾಲಕಟ್ಟೆವರೆಗಿನ ಸುಮಾರು 20 ಕಿ.ಮೀ. ಹೆದ್ದಾರಿಯ ನಿರ್ವಹಣೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 34.53 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
ಜತೆಗೆ, ಬಿ.ಸಿ. ರೋಡ್ ಜಂಕ್ಷನ್‌ನಿಂದ ಬಂಟ್ವಾಳ ಕಡೆಗೆ ಹೋಗುವ ಶ್ರೀ ನಾರಾಯಣಗುರು ಮಂದಿರದವರೆಗಿನ ರಸ್ತೆಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 22.59 ಕೋಟಿ ರೂ. ಹಾಗೂ ಬಿ.ಸಿ. ರೋಡ್ ಜಂಕ್ಷನ್ ಮತ್ತು ಚಾರ್ಮಾಡಿ ಘಾಟಿ ಭಾಗದ ರಸ್ತೆ ನಿರ್ವಹಣೆ ಕಾಮಗಾರಿಗಳಿಗಾಗಿ 6.92 ಕೋಟಿ ರೂ. ಅನುದಾನ ದೊರೆತಿದೆ. ಈ ಭಾಗದ ಅಭಿವೃದ್ಧಿಯು 'ವಿಕಸಿತ ದಕ್ಷಿಣ ಕನ್ನಡ' ನಿರ್ಮಾಣದ ಹಾದಿಯಲ್ಲಿ ಪ್ರಮುಖ ಹೆಜ್ಜೆಯಾಗಲಿದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಹೆದ್ದಾರಿಗಳ ಅಭಿವೃದ್ಧಿಯಿಂದ ಸರಕು ಸಾಗಣೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಆರ್ಥಿಕ ಪ್ರಗತಿಗೆ ಹೊಸ ವೇಗ ಸಿಗಲಿದೆ. ಈ ವಿಶೇಷ ಅನುದಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ, ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ಹೆದ್ದಾರಿಯನ್ನು 613.66 ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕೂಡ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಬಿ.ಸಿ. ರೋಡ್ ಭಾಗದ ಕಾಮಗಾರಿಗಳಿಗೂ ಚಾಲನೆ ಸಿಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.