ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಸೌಕರ್ಯ ವೃದ್ಧಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಹಂತ-2) ಮತ್ತು ಎನ್‍ಜಿಟಿ ಪರಿಹಾರ ನಿಧಿಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಏಪ್ರಿಲ್ 18ರ ಶನಿವಾರದಂದು ಚಾಲನೆ ನೀಡಲಾಗುವುದು.
ಅಂದು ಬೆಳಿಗ್ಗೆಯಿಂದಲೇ ನಗರದ ವಿವಿಧೆಡೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಲಿದೆ. ಬೆಳಿಗ್ಗೆ 9 ಗಂಟೆಗೆ ಮರವೂರು ಏರ್‍ಪೋರ್ಟ್ ರಸ್ತೆ, 9:45ಕ್ಕೆ ವೆಲೆನ್ಸಿಯಾ ಚರ್ಚ್ ರಸ್ತೆ, 10:30ಕ್ಕೆ ಸುಂಕದಕಟ್ಟೆ-ಉರ್ವಸ್ಟೋರ್ ರಸ್ತೆ ಹಾಗೂ 10:45ಕ್ಕೆ ಚಿಲಿಂಬಿಗುಡ್ಡೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ.
ನಂತರ ಬೆಳಿಗ್ಗೆ 11 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಫರೀದ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಸುರೇಶ್ ಬಿ. ಎಸ್. ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.