ಮಂಗಳೂರು : ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ತಂತ್ರಜ್ಞಾನ ಶಿಕ್ಷಣದಲ್ಲಿ ಅಪ್ರತಿಮ ಸಾಧನೆ ಮಾಡಬಲ್ಲರು ಎಂಬುದನ್ನು ಮೂಡಿಗೆರೆಯ ರಿಶಲ್ ತಾವ್ರೊ ಸಾಬೀತುಪಡಿಸಿದ್ದಾರೆ. ಮಂಗಳೂರಿನ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿಟೆಕ್ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್) ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಉತ್ತೀರ್ಣರಾದ ರಿಶಲ್ ತಾವ್ರೊ ಅವರನ್ನು ತಾವ್ರೊ ಕುಟುಂಬದ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೂವೆ ಎಂಬ ಸಣ್ಣ ಹಳ್ಳಿಯವರಾದ ರಿಶಲ್, ಮಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದು ಈ ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಬಹುಭಾಷಾ ಸಾಹಿತಿ ಹಾಗೂ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಅವರು ಸಾಧಕ ವಿದ್ಯಾರ್ಥಿಯನ್ನು ಸನ್ಮಾನಿಸಿದರು.
ಸನ್ಮಾನ ನೆರವೇರಿಸಿ ಮಾತನಾಡಿದ ರೇಮಂಡ್ ಡಿಕೂನಾ ಅವರು, "ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಇತರರಿಗೆ ಪ್ರೇರಣೆ ನೀಡಲು. ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಉದ್ಯೋಗಕ್ಕೆ ಸೇರುವ ವಿದ್ಯಾರ್ಥಿಗಳು ತಮ್ಮ ಗ್ರಾಮದ ಹಾಗೂ ಸುತ್ತಮುತ್ತಲಿನ ಬಡ ಮತ್ತು ಅನಾನುಕೂಲವಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮನೋಭಾವ ಹೊಂದಿರಬೇಕು," ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವ್ರೊ ಕುಟುಂಬದ ಹಿರಿಯರಾದ ಜೋನ್ ತಾವ್ರೊ ವಹಿಸಿದ್ದರು. ರಾಜ್ಯ ಶಿಕ್ಷಕರ ಯೂನಿಯನ್ ನಿಕಟಪೂರ್ವ ಉಪಾಧ್ಯಕ್ಷ ಸ್ಟೇನಿ ತಾವ್ರೊ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ವೇದಿಕೆಯಲ್ಲಿ ಚಿನ್ನದ ಪದಕ ವಿಜೇತ ರಿಶಲ್ ತಾವ್ರೊ, ಅವರ ತಂದೆ ಜೊಸೆಫ್ ತಾವ್ರೊ ಹಾಗೂ ಅಜ್ಜ ಆ್ಯಂಟನಿ ವಾಲ್ಡರ್ ಉಪಸ್ಥಿತರಿದ್ದರು. ತಮ್ಮ ಕುಟುಂಬದ ಕುಡಿ ತಾಂತ್ರಿಕ ಶಿಕ್ಷಣದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿರುವುದಕ್ಕೆ ತಾವ್ರೊ ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.