image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೆಪ್ಪು ಬಪ್ಪಾಲ್ ವೆಟ್‌ವೆಲ್ ಕಾಮಗಾರಿ ವಿಳಂಬ: ಸಾರ್ವಜನಿಕರ ಆಕ್ರೋಶ - ಸ್ಥಳಕ್ಕೆ ಐವನ್ ಡಿಸೋಜ ಭೇಟಿ

ಜೆಪ್ಪು ಬಪ್ಪಾಲ್ ವೆಟ್‌ವೆಲ್ ಕಾಮಗಾರಿ ವಿಳಂಬ: ಸಾರ್ವಜನಿಕರ ಆಕ್ರೋಶ - ಸ್ಥಳಕ್ಕೆ ಐವನ್ ಡಿಸೋಜ ಭೇಟಿ

ಮಂಗಳೂರು : ಮಂಗಳೂರಿನ ಜೆಪ್ಪು ಬಪ್ಪಾಲ್‌ನಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ವೆಟ್‌ವೆಲ್ ಕಾಮಗಾರಿಯು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಲ್ಲಿನ ಕಾಮಗಾರಿ ವಿಳಂಬ ಮತ್ತು ವೈಫಲ್ಯದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿʼಸೋಜಾ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಬಂಡೆಕಲ್ಲುಗಳನ್ನು ಒಡೆಯುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ಈ ವೆಟ್‌ವೆಲ್ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು, ಡ್ರೈನೇಜ್ ನೀರು ರಸ್ತೆ ಮತ್ತು ಚರಂಡಿಗಳಲ್ಲಿ ಹರಿಯುತ್ತಿದೆ. ಈ ಹಿಂದೆ ವೆಟ್‌ವೆಲ್‌ನ ಪಂಪುಗಳು ಕೆಟ್ಟು ಹೋಗಿರುವುದು ಮತ್ತು ಸರಿಯಾದ ಸಂಪರ್ಕ ಇಲ್ಲದಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಚರಂಡಿಗಳಲ್ಲಿ ಹರಿಯುತ್ತಿರುವ ಮಲಿನ ನೀರು ಸ್ಥಳೀಯರ ಬಾವಿಗಳನ್ನು ಸೇರುತ್ತಿದ್ದು, ಕುಡಿಯುವ ನೀರು ಕಲುಷಿತಗೊಂಡಿದೆ. ಇದರಿಂದಾಗಿ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು, ಅನೇಕರು ಈಗಾಗಲೇ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

​ಪರಿಶೀಲನೆಯ ಸಂದರ್ಭದಲ್ಲಿ ಅಧಿಕಾರಿಗಳು ಪ್ರತಿಕ್ರಿಯಿಸಿ, ಬಂಡೆಕಲ್ಲುಗಳ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ ಎಂದು ತಿಳಿಸಿದರು. ಇನ್ನು ಕೆಲವೇ ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಮುಂದಿನ ತಿಂಗಳೊಳಗೆ ಈಗಿನ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್‌ಗಳಾದ ಭಾಸ್ಕರ್ ರಾವ್ ಮತ್ತು ಅಪ್ಪಿಲತಾ, ಕಾಂಗ್ರೆಸ್ ನಾಯಕರಾದ ಅನಿಲ್ ತೋರಸ್, ವಿದ್ಯಾ ಅನಿಲ್, ಮೊಹಮ್ಮದ್ ನವಾಜ್ ಜಪ್ಪು, ನೆಲ್ಸನ್ ರೋಚೆ ಹಾಗೂ ಸ್ಥಳೀಯರಾದ ಜೋಸೆಫ್, ಸದಾನಂದ, ಇಡ್ನಾ ಡಿ’ಸೋಜಾ, ಸುರೇಂದ್ರ ಶೆಟ್ಟಿ, ರಮೇಶ್ ಶೆಟ್ಟಿ, ರೆಜಿನಾಲ್ಡ್ ಡಿಕೋಸ್ಟಾ, ಶಂಕರ್ ಭಟ್, ಸಂದೇಶ್, ತನ್ವಿ ಶೆಟ್ಟಿ ಮತ್ತು ಮೈಮು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ