image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಸಂಸ್ಥೆಯಿಂದ ಎಪ್ರಿಲ್ 18ರಂದು ‘ಸಮಗ್ರ ಕೃಷಿ ಪದ್ಧತಿ’ ವಿಚಾರ ಸಂಕಿರಣ

ಆಳ್ವಾಸ್ ಸಂಸ್ಥೆಯಿಂದ ಎಪ್ರಿಲ್ 18ರಂದು ‘ಸಮಗ್ರ ಕೃಷಿ ಪದ್ಧತಿ’ ವಿಚಾರ ಸಂಕಿರಣ

ಮೂಡುಬಿದಿರೆ: ಸುಸ್ಥಿರ ಕೃಷಿ ಮತ್ತು ರೈತರ ಆದಾಯ ವೃದ್ಧಿಯ ಆಶಯದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ‘ಸುಸ್ಥಿರ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿ’ ಎಂಬ ಒಂದು ದಿನದ ರೈತ-ವಿಜ್ಞಾನಿಗಳ ವಿಚಾರ ಸಂಕಿರಣವನ್ನು ಎಪ್ರಿಲ್ 18ರಂದು ಮಿಜಾರಿನ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಿದೆ. ಕೃಷಿ ವಿಚಾರ ವಿನಿಮಯ ಕೇಂದ್ರ, ರೈತಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತೋಟಗಾರಿಕೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ಕಾರ್ಯಕ್ರಮದ ಸಹಭಾಗಿಯಾಗಿದ್ದಾರೆ. ​ಈ ಮಹತ್ವದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಸರಗೋಡು ಸಿ.ಪಿ.ಸಿ.ಆರ್.ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ ಅನಿಲ್ ಕುಮಾರ್ ಎಸ್.ಎಸ್, ಮಂಗಳೂರು ಕೃಷಿ ಒಕ್ಕೂಟದ ಸುನಿಲ್ ಸೋನ್ಸ್, ಹಿರಿಯ ತೋಟಗಾರಿಕಾ ನಿರ್ದೇಶಕ ಕೆ. ಪ್ರವೀಣ್ ಹಾಗೂ ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಭಾಗವಹಿಸಲಿದ್ದಾರೆ.

​ವಿಚಾರ ಸಂಕಿರಣದಲ್ಲಿ ನುರಿತ ವಿಜ್ಞಾನಿಗಳಿಂದ ಕೃಷಿ ಉತ್ಪಾದಕತೆ ಹೆಚ್ಚಿಸುವ ಕುರಿತು ಸಮಾಲೋಚನೆ ನಡೆಯಲಿದೆ. ವಿಶ್ರಾಂತ ವಿಜ್ಞಾನಿ ಡಾ. ಮಹೇಂದ್ರಕರ್ ಶ್ರೀನಿವಾಸರಾವ್ ಮಣ್ಣಿನ ಆರೋಗ್ಯ ಮತ್ತು ಜೈವಿಕ ಗೊಬ್ಬರಗಳ ಬಗ್ಗೆ, ಸತ್ಯನಾರಾಯಣ ಉಡುಪ ಮತ್ತು ಸುನಿಲ್ ಸೋನ್ಸ್ ಕಲ್ಪರಸ ಉತ್ಪಾದನಾ ತಾಂತ್ರಿಕತೆ ಬಗ್ಗೆ, ವಿಜ್ಞಾನಿ ಡಾ. ಮಂಜೇಶ ಜಿ.ಎನ್ ಕರಾವಳಿ ಪ್ರದೇಶದ ಪರ್ಯಾಯ ಬೆಳೆಗಳ ಬಗ್ಗೆ ಹಾಗೂ ತಳಿ ಸಂರಕ್ಷಕ ಪೂಣಚ್ಚ ನಾಪಂಡ ಕಾಳುಮೆಣಸಿನ ದೇಸಿ ತಳಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದರೊಂದಿಗೆ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆ ಮತ್ತು ಅದರ ಪ್ರಾಯೋಗಿಕತೆ ಬಗ್ಗೆಯೂ ರೈತರಿಗೆ ವಿಶೇಷ ಮಾಹಿತಿ ನೀಡಲಾಗುತ್ತದೆ. ಕರಾವಳಿ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ವಿನಂತಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ. ವಾಸುದೇವ್ ನಭಿರಾಜ್, ಡಾ. ಸುರೇಶ್, ರಾಜವರ್ಮ ಬೈಲಂಗಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.

Category
ಕರಾವಳಿ ತರಂಗಿಣಿ