ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ಕದ್ರಿ ಶಿವಭಾಗ್ ವಾರ್ಡಿನ ತೋಮನಾಯ್ಗರ ರಸ್ತೆಯ ಬದಿಯಲ್ಲಿ ತಡೆಗೋಡೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಶಾಸಕರು, ರಾಜಕಾಲುವೆಯಿಂದ ಮಳೆ ನೀರು ಉಕ್ಕಿ ಸ್ಥಳೀಯ ಮನೆಗಳಿಗೆ ಹಾನಿಯಾಗುವುದನ್ನು ತಡೆಗಟ್ಟಲು ತಡೆಗೋಡೆ ನಿರ್ಮಿಸಬೇಕೆಂಬುದು ಇಲ್ಲಿನ ನಿವಾಸಿಗಳ ದೀರ್ಘಕಾಲದ ಬೇಡಿಕೆಯಾಗಿತ್ತು. ಈ ಮನವಿಗೆ ಸ್ಪಂದಿಸಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಗತ್ಯ ಅನುದಾನವನ್ನು ಮೀಸಲಿರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ರಾಜ್ಯದ ಇತಿಹಾಸದಲ್ಲೇ ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜಕಾಲುವೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರಕ್ಕಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದ್ದು, ತಾಂತ್ರಿಕ ಕಾರಣಗಳಿಂದ ತಡೆಹಿಡಿಯಲ್ಪಟ್ಟಿದ್ದ ಮುಂದುವರಿದ ಕಾಮಗಾರಿಗೆ ಇದೀಗ ಮರುಚಾಲನೆ ದೊರೆತಿದೆ. ಈ ಯೋಜನೆಯು ಶೀಘ್ರದಲ್ಲೇ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಕಾವ್ಯ ನಟರಾಜ್ ಆಳ್ವ, ಶಕ್ತಿಕೇಂದ್ರ ಪ್ರಮುಖ್ ವಿಕ್ರಂ ಚೌಟ, ಬೂತ್ ಅಧ್ಯಕ್ಷರಾದ ಶಿವರಾಮ್ ಭಂಡಾರಿ, ನವೀನ್ ಶೆಣೈ, ಯೋಗಿಶ್ ಶೆಣೈ ಹಾಗೂ ನಟರಾಜ್ ಆಳ್ವ, ವನಿತಾ ರೈ, ರಂಜಿನಿ ರೈ, ಅಮಿತಾ ಶೆಟ್ಟಿ, ಅಶೋಕ್ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು, ವಾರ್ಡಿನ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.