ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಜನತಾದಳದ (ಜಾತ್ಯತೀತ) ನೂತನ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಶ್ರೀ ಶಶಿರಾಜ್ ಶೆಟ್ಟಿ ಕೊಳಂಬೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಈ ನೇಮಕಾತಿಯನ್ನು ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಘಟಕವು ಬಿಡುಗಡೆ ಮಾಡಿದ ಜಿಲ್ಲಾ ಪದಾಧಿಕಾರಿಗಳ ನೂತನ ಪಟ್ಟಿಯ ಕುರಿತು ಜಿಲ್ಲಾಧ್ಯಕ್ಷರಾದ ಮಾಧವ ಗೌಡ ಅವರು ಪತ್ರಿಕಾಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡಿದರು. ಶಶಿರಾಜ್ ಶೆಟ್ಟಿ ಅವರ ನೇಮಕವು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಮತ್ತು ಸಂಘಟನಾತ್ಮಕವಾಗಿ ಹೊಸ ಚೈತನ್ಯ ನೀಡಲು ಸಹಕಾರಿಯಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.