ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜು.16ರಂದು ಅಂಕೋಲಾದ ಶಿರೂರು ಬಳಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು 11 ಮಂದಿ ನಾಪತ್ತೆಯಾಗಿದ್ದರು. 15 ದಿನಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೂಡ ಬಂದಾಗಿತ್ತು. ಈವರೆಗೆ ಮೂರು ಹಂತದ ಕಾರ್ಯಾಚರಣೆ ನಡೆಸಿದರೂ ಕೂಡ ಇನ್ನೂ ಇಬ್ಬರ ಮೃತದೇಹ ಪತ್ತೆಯಾಗಿಲ್ಲ.
ಶಿರೂರು ಗುಡ್ಡ ಕುಸಿತ ರಾಜ್ಯದಲ್ಲಿಯೇ ಈ ವರ್ಷ ಕಂಡ ಭೀಕರ ದುರಂತಗಳಲ್ಲಿ ಒಂದು. ಘಟನೆ ಸಂಭವಿಸಿ ಎರಡು ತಿಂಗಳು ಕಳೆದರೂ ಕೂಡ ನಾಪತ್ತೆಯಾದ ಇಬ್ಬರ ಸುಳಿವು ಪತ್ತೆಯಾಗಿಲ್ಲ. ಅಲ್ಲದೆ, ಕುಸಿದ ಗುಡ್ಡದಿಂದ ಬಿದ್ದ ಮಣ್ಣು ಗಂಗಾವಳಿ ನದಿಯಲ್ಲಿ ತುಂಬಿಕೊಂಡಿರುವಾಗಲೇ ಕಾರ್ಯಾಚರಣೆಗೆ ಬಂದ ಡ್ರೆಜ್ಜಿಂಗ್ ಮಷಿನ್ ಗುತ್ತಿಗೆ ಒಪ್ಪಂದ ಮುಗಿದ ಬೆನ್ನಲ್ಲೇ ವಾಪಸು ತೆರಳಿದೆ. ಇದರಿಂದಾಗಿ ಮುಂದೆ ಎದುರಾಗಬಹುದಾದ ಆಪತ್ತುಗಳ ಬಗ್ಗೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಶಿರೂರು ಘಟನೆಯಲ್ಲಿ ಈವರೆಗೆ 9 ಮಂದಿಯ ಶವ ಪತ್ತೆಯಾಗಿದೆ. ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಶಾಸಕ ಸತೀಶ್ ಸೈಲ್ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಗೋವಾದಿಂದ ಡ್ರೆಜ್ಜಿಂಗ್ ಯಂತ್ರವನ್ನು ತರಿಸಿ ಕಾರ್ಯಾಚರಣೆ ನಡೆಸಲು ನೆರವಾಗಿದ್ದರು. ಒಟ್ಟು 13 ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಕೇರಳದ ಅರ್ಜುನ್ ಚಲಿಸುತ್ತಿದ್ದ ಲಾರಿ, ಆತನ ಶವ ಸೇರಿದಂತೆ ಕೆಲವೊಂದು ವಸ್ತುಗಳು ಹಾಗೂ ಮೂರು ದಿನಗಳ ಹಿಂದಷ್ಟೆ ಮನುಷ್ಯನ ಎರಡು ಮೂಳೆಗಳು ಪತ್ತೆಯಾಗಿವೆ.
2019-20, 2020-21ರಲ್ಲಿ ಪ್ರವಾಹ ಬಂದು ಅನೇಕ ಮನೆಗಳನ್ನು ಕಳೆದುಕೊಂಡು ಆಸ್ತಿಗೆ ಹಾನಿಯಾಗಿದೆ. ಅದು ಮರುಕಳಿಸಬಾರದಂತೆ ಮೊದಲು ನದಿಯಲ್ಲಿ ತುಂಬಿರುವ ಮಣ್ಣನ್ನು ತೆರವುಗೊಳಿಸಿಕೊಡಬೇಕಿದೆ. ಒಂದು ವೇಳೆ ಈ ಮಣ್ಣನ್ನು ತೆರವುಗೊಳಿಸದೆ ಇದ್ದಲ್ಲಿ ಎಲ್ಲ ಸಾರ್ವಜನಿಕರೂ ಸೇರಿ ಶಿರೂರು ಹತ್ತಿರ ಗುಡ್ಡ ಕುಸಿತವಾದ ಜಾಗದಲ್ಲಿ ಧರಣಿ ಮಾಡಲಾಗುವುದು'' ಎಂದು ವಾಸರಕುದರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ ನಾಯ್ಕ ಎಚ್ಚರಿಸಿದ್ದಾರೆ.