image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ಅಭಿವೃದ್ಧಿ: ಎನ್.ಎಂ.ಪಿ.ಎ ವತಿಯಿಂದ 11 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭ

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ಅಭಿವೃದ್ಧಿ: ಎನ್.ಎಂ.ಪಿ.ಎ ವತಿಯಿಂದ 11 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭ

ಸುರತ್ಕಲ್: ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬದಿಯ ರಸ್ತೆಯನ್ನು 11 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ಹಾಗೂ ಸುಸಜ್ಜಿತ ಟ್ರಕ್ ಯಾರ್ಡ್ ನಿರ್ಮಿಸುವ ಕಾರ್ಯಕ್ಕೆ ಗುರುವಾರದಿಂದ ಚಾಲನೆ ಸಿಗಲಿದೆ. ಶಾಸಕ ಡಾ. ಭರತ್ ಶೆಟ್ಟಿ ವೈ. ಅವರ ವಿಶೇಷ ಮನವಿಯ ಮೇರೆಗೆ ನವಮಂಗಳೂರು ಬಂದರು ಪ್ರಾಧಿಕಾರ (NMPA) ಈ ಯೋಜನೆಯ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡಿದೆ.

ಈ ಬೃಹತ್ ಕಾಮಗಾರಿಯ ಪೂರ್ವಸಿದ್ಧತೆಯ ಕುರಿತು ಶಾಸಕ ಡಾ. ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆಯಿತು. ಕೆ.ಐ.ಎ.ಡಿ.ಬಿ, ಸಂಚಾರಿ ಪೊಲೀಸ್ ಹಾಗೂ ಬಂದರು ಪ್ರಾಧಿಕಾರದ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ಕಾಮಗಾರಿ ನಡೆಯುವ ಅವಧಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಕೈಗಾರಿಕಾ ಪ್ರದೇಶವಾಗಿರುವುದರಿಂದ ಇಲ್ಲಿ ಭಾರೀ ವಾಹನಗಳ ಓಡಾಟ ಹೆಚ್ಚಿದ್ದು, ಕಾಮಗಾರಿ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಸಂಬಂಧಪಟ್ಟ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಅಧಿಕೃತ ಆದೇಶ ಹೊರಡಿಸಲಿದ್ದು, ಗುರುವಾರದಿಂದಲೇ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ನಿಗದಿಪಡಿಸಲಾಗಿದೆ.
ದೀರ್ಘಕಾಲದಿಂದ ಬೈಕಂಪಾಡಿ ರಸ್ತೆ ದುರಸ್ತಿ ಮತ್ತು ಕಾಂಕ್ರೀಟೀಕರಣಕ್ಕೆ ಆಗ್ರಹಿಸುತ್ತಿದ್ದ ಸ್ಥಳೀಯ ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಈ ನಿರ್ಧಾರವು ಸಮಾಧಾನ ತಂದಿದೆ. ಮುಂದಿನ ಎರಡು ತಿಂಗಳ ಒಳಗಾಗಿ ಈ ಯೋಜನೆಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಬಂದರು ಪ್ರಾಧಿಕಾರ, ಟ್ರಾಫಿಕ್ ಪೊಲೀಸ್ ಮತ್ತು ಕೆ.ಐ.ಎ.ಡಿ.ಬಿ ಅಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ