image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಲಿವುಡ್ ನಟ ಸುನೀಲ್ ಶೆಟ್ಟಿ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ: ದೈವದ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ

ಬಾಲಿವುಡ್ ನಟ ಸುನೀಲ್ ಶೆಟ್ಟಿ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ: ದೈವದ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ

ಮಂಗಳೂರು: ಕರಾವಳಿಯ ಅತ್ಯಂತ ಕಾರಣಿಕ ಕ್ಷೇತ್ರವೆಂದೇ ನಂಬಲಾದ ಕುತ್ತಾರಿನ ಕೊರಗಜ್ಜನ ಆದಿಸ್ಥಳಕ್ಕೆ ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ ಅವರು ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೂಲತಃ ಕರಾವಳಿಯವರೇ ಆದ ಸುನೀಲ್ ಶೆಟ್ಟಿ ಅವರು ತಮ್ಮ ಕುಟುಂಬದ ಮನೆಯಲ್ಲಿ ನಡೆಯುತ್ತಿರುವ ವರ್ಷಾವಧಿ ಪರ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಊರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಕೊರಗಜ್ಜನ ಕಟ್ಟೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ವರ್ಷದ ಆರಂಭದಲ್ಲೂ ಅವರು ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

​ಕ್ಷೇತ್ರ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇಂದು ಬೆಳಿಗ್ಗೆಯಷ್ಟೇ ಅಜ್ಜನ ದರ್ಶನ ಪಡೆಯಬೇಕೆಂದು ಮನಸ್ಸಾಯಿತು. ಇಂತಹ ಶುಭ ದಿನದಂದೇ ಅಜ್ಜನ ಸನ್ನಿಧಿಗೆ ಬರುವಂತಾದುದು ನನ್ನ ಸೌಭಾಗ್ಯ. ಇಲ್ಲಿಗೆ ಬಂದಾಗಲೆಲ್ಲ ಮನಸ್ಸಿಗೆ ಅಪಾರ ಶಾಂತಿ ದೊರೆಯುತ್ತದೆ. ಎಲ್ಲರ ಉತ್ತಮ ಆರೋಗ್ಯಕ್ಕಾಗಿ ದೈವದಲ್ಲಿ ಪ್ರಾರ್ಥಿಸಿದ್ದೇನೆ" ಎಂದು ಸಂತಸ ಹಂಚಿಕೊಂಡರು. ತಮ್ಮ ಕುಟುಂಬದ ಕುರಿತು ಮಾತನಾಡಿದ ನಟ, ಮುಲ್ಕಿ ಸಮೀಪದ ಶಿಮಂತೂರಿನಲ್ಲಿರುವ ತಮ್ಮ ತರವಾಡು ಮನೆಯಲ್ಲಿ ದೈವದ ಪೂಜೆ ಹಾಗೂ ತೇರು ನಡೆಯುತ್ತಿರುವುದರಿಂದ ಕುಟುಂಬ ಸಮೇತರಾಗಿ ಆಗಮಿಸಿರುವುದಾಗಿ ತಿಳಿಸಿದರು. ಮಗ ಅಹಾನ್ ಶೆಟ್ಟಿ ಕೂಡ ಬರಬೇಕಿತ್ತು, ಆದರೆ ಕುಟುಂಬದಲ್ಲಿ ಸಂಭವಿಸಿದ ಮರಣದ ಸೂತಕದ ಹಿನ್ನೆಲೆಯಲ್ಲಿ ಅವನಿಗೆ ಬರಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಆತನೂ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾನೆ ಎಂದು ಅವರು ಮಾಹಿತಿ ನೀಡಿದರು.

​ಇದೇ ಸಂದರ್ಭದಲ್ಲಿ 'ನಮ್ಮ ನಡೆ' ಆಯೋಜಕರಾದ ಪ್ರವೀಣ್ ಕುತ್ತಾರ್ ಹಾಗೂ ವಿಶ್ವ ಹಿಂದೂ ಪರಿಷತ್ ಉಳ್ಳಾಲ ನಗರ ಪ್ರಖಂಡ ಅಧ್ಯಕ್ಷರಾದ ನಾರಾಯಣ ಕುಂಪಲ ಅವರು ಸುನೀಲ್ ಶೆಟ್ಟಿ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

Category
ಕರಾವಳಿ ತರಂಗಿಣಿ