ಮಂಗಳೂರು: ನಗರದ ಬೆಂಗರೆಯ ಸ್ಯಾಂಡ್ಸ್‌ಪಿಟ್ ಪ್ರದೇಶದಲ್ಲಿರುವ ಶ್ರೀ ವೀರ ಭಾರತಿ ರಾಮಾಂಜನೇಯ ಮಂದಿರದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಏಪ್ರಿಲ್ 17ರಿಂದ 20ರವರೆಗೆ ಅತ್ಯಂತ ಭಕ್ತಿಭಾವದಿಂದ ಜರುಗಲಿವೆ ಎಂದು ಮಂದಿರದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಮೋಹನ್ ಬೆಂಗ್ರೆ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಏಪ್ರಿಲ್ 18ರಂದು ಬೆಳಿಗ್ಗೆ 8ರಿಂದ 9ರ ವರೆಗಿನ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಲ್ಲಿ ಸೀತಾ ರಾಮ ಲಕ್ಷ್ಮಣ ಹನುಮಾನ್ ಸಮೇತ ಪಟ್ಟಾಭಿರಾಮ ದೇವರ ಬಿಂಬ ಪ್ರತಿಷ್ಠೆ, ವೀರ ಮಾರುತಿ ದೇವರ ಬಿಂಬ ಪುನಃ ಪ್ರತಿಷ್ಠೆ ಹಾಗೂ ನಾಗಶಿಲಾ ಪುನಃ ಪ್ರತಿಷ್ಠಾ ಕಾರ್ಯಕ್ರಮಗಳು ನೆರವೇರಲಿವೆ ಎಂದು ವಿವರಿಸಿದರು.
ಅದೇ ದಿನ ಬೆಳಿಗ್ಗೆ 10.30ಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಮಂದಿರದ ಸ್ವಾಗತ ಗೋಪುರವನ್ನು ಉದ್ಘಾಟಿಸಲಿದ್ದಾರೆ. ತದನಂತರ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಾಡೋಜ ಜಿ. ಶಂಕರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಏಪ್ರಿಲ್ 19ರ ಅಕ್ಷಯ ತೃತೀಯೆಯ ಶುಭ ದಿನದಂದು ಬೆಳಿಗ್ಗೆ 11ರಿಂದ 12ರ ವರೆಗಿನ ಮಿಥುನ ಲಗ್ನದಲ್ಲಿ ಶ್ರೀ ಪಟ್ಟಾಭಿರಾಮಚಂದ್ರ ಹಾಗೂ ವೀರ ಮಾರುತಿ ದೇವರಿಗೆ ನವೋತ್ತರ ಶತಕಲಶ ಸಹಿತ ಬ್ರಹ್ಮಕಲಶಾಭಿಷೇಕ ಜರುಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚೇತನ್ ಬೆಂಗ್ರೆ, ಸದಸ್ಯರಾದ ಆನಂದ್ ಅಮೀನ್, ಮೋಹನ್ ಅಮೀನ್ ಹಾಗೂ ತುಕರಾಮ್ ಕರ್ಕೇರ ಅವರು ಉಪಸ್ಥಿತರಿದ್ದರು. ನಾಲ್ಕು ದಿನಗಳ ಕಾಲ ನಡೆಯುವ ಈ ಪುಣ್ಯ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಮನವಿ ಮಾಡಿದೆ.