ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 31ನೇ ಬಿಜೈ ವಾರ್ಡಿನಲ್ಲಿ ಸುಮಾರು 50 ಲಕ್ಷ ರೂ.ವಿಶೇಷ ಅನುದಾನದಲ್ಲಿ ಕೊಟ್ಟಾರ ಕ್ರಾಸ್‌ನಿಂದ ಕೆ.ಎಸ್.ಆರ್.ಟಿ.ಸಿ. ಕ್ವಾಟ್ರಸ್ ಮುಖಾಂತರ ಎ.ಜೆ. ಆಸ್ಪತ್ರೆಗೆ ಸಂಪರ್ಕಿಸುವ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಯು ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.
ನಂತರ ಮಾತನಾಡಿದ ಶಾಸಕರು, ಕೆ.ಎಸ್.ಆರ್.ಟಿ.ಸಿ ಅಧೀನದಲ್ಲಿರುವ ಈ ಸ್ಥಳವನ್ನು ಕಳೆದ 70 ವರ್ಷಗಳಿಂದ ಜನರು ಬಳಸುತ್ತಿದ್ದರೂ ಇಲ್ಲಿ ಸುಸಜ್ಜಿತ ರಸ್ತೆಯೇ ಇರಲಿಲ್ಲ. ರಸ್ತೆ ನಿರ್ಮಾಣವಾದರೆ ಸ್ಥಳೀಯರಿಗೆ ಹೆಚ್ಚಿನ ಉಪಯೋಗವಾಗಲಿದ್ದು ಆ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸ್ಥಳೀಯ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ನಿವಾಸಿಗಳು, ಅನೇಕ ಬಾರಿ ನನ್ನಲ್ಲಿ ಮನವಿ ಮಾಡಿದ್ದರು. ಅದರಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನವನ್ನು ಮೀಸಲಿಡುವಲ್ಲಿ ಯಶಸ್ವಿಯಾಗಿದ್ದೆವು. ಆದರೆ ಕೆ.ಎಸ್.ಆರ್.ಟಿ.ಸಿ ನಿರಪೇಕ್ಷಣೆಯಿಲ್ಲದೇ ಈ ಕಾರ್ಯ ಮುಂದುವರಿಯಲು ಸಾಧ್ಯವಿರಲಿಲ್ಲ. ಆಗ ಅಧಿಕಾರಿಯಾದ ರಾಜೇಶ್ ಶೆಟ್ಟಿಯವರ ಸಹಿತ ಅನೇಕರು ಸಹಕಾರ ನೀಡಿದ ಪರಿಣಾಮ ಇಂದು ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, ಏಳು ದಶಕಗಳ ಬೇಡಿಕೆಗೆ ಈಡೇರಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಪ್ರಶಾಂತ್ ಆಳ್ವ, ರಾಜೇಶ್, ದಿನೇಶ್, ಸಂಜಯ್ ಪ್ರಭು, ಮನೋಜ್, ದೀಪಿಕಾ, ಸಂತೋಷ್ ಉಳ್ಳಾಲ್, ಋತ್ವಿಕ್ ಕದ್ರಿ, ಜಯ ಕುಮಾರ್, ನಾರಾಯಣ್, ಅನಂತ್ ಮಲ್ಯ, ಗೋಕುಲ್ ಕಾಮತ್, ಅಲ್ಬುಕರ್ಕ್, ಸೇರಿದಂತೆ ವಾರ್ಡಿನ ಕಾರ್ಯಕರ್ತರು, ಪರಿಸರದ ನಿವಾಸಿಗಳು ಹಾಗೂ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಕೆ.ಎಸ್.ಆರ್.ಟಿ.ಸಿ, ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.